ಮಂಗಳೂರು: ಸಾಧನೆ ಮಾಡಬೇಕೆಂಬ ಉತ್ಸಾಹವಿದ್ದಲ್ಲಿ ವಯಸ್ಸು ಅಡ್ಡಿಯಾಗೋಲ್ಲ ಎಂಬುದನ್ನು ಮಂಗಳೂರು ವಿವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಅಟೆಂಡರ್ ಜಯಶ್ರೀ ತೋರಿಸಿಕೊಟ್ಟಿದ್ದಾರೆ. ತಮ್ಮ 44ನೇ ವಯಸ್ಸಿನಲ್ಲಿ ನೌಕರಿ ಮಾಡುವುದರ ಜೊತೆಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಅದರಲ್ಲಿ ಅವರು ಉತ್ತೀರ್ಣರಾಗಿದ್ದಾರೆ.
ನಗರದ ವೆಲೆನ್ಸಿಯಾದ ಸೂಟರ್ ಪೇಟೆಯ ನಿವಾಸಿ ಜಯಶ್ರೀ 5ನೇ ತರಗತಿವರೆಗೆ ಶಾಲೆಗೆ ಹೋಗಿದ್ದು, ಬಳಿಕ ಅವರಿಗೆ ಶಿಕ್ಷಣ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಅವರು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನೇರವಾಗಿ ಬರೆದಿದ್ದಾರೆ. ಖಾಸಗಿ ಟ್ಯೂಶನ್ ಕ್ಲಾಸ್ನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಯಶ್ರೀ, "ಸಣ್ಣ ವಯಸ್ಸಿನಲ್ಲಿ ಕಲಿಯುವ ಮನಸ್ಸಿದ್ದರೂ ಪ್ರೇರೇಪಣೆ ನೀಡುವವರು ಯಾರೂ ಇರಲಿಲ್ಲ. ಆದರೆ ಇದೀಗ ಮಂಗಳೂರು ವಿವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಶೋಭಾ ಅವರು ಕಲಿಯಲು ದಾರಿ ತೋರಿಸಿದರು. ಈ ಮೂಲಕ ನನಗೆ ನೌಕರಿಯೂ ಖಾಯಂ ಆಗಬಹುದು ಎಂಬ ಉದ್ದೇಶವೂ ಇದೆ. ವಿದ್ಯಾರ್ಥಿಗಳಿಗೆ ನಾನು ಹೇಳುವುದೊಂದೇ, ಅವಕಾಶ ಸಿಕ್ಕಾಗ ಸರಿಯಾಗಿ ಶಿಕ್ಷಣ ಪೂರೈಸಿ. ಕಳೆದು ಹೋದ ಸಮಯ ಮತ್ತೆ ಬಾರದು" ಎಂದರು.