ಮಂಗಳೂರು: ನಗರದಲ್ಲಿ ಕೊರೊನಾ ಆತಂಕ ಹೆಚ್ಚಾಗಿದ್ದು, ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳಿಗೆ ಕ್ವಾರಂಟೈನ್ ವಿಧಿಸಲಾಗಿದೆ. ಮತ್ತೊಂದೆಡೆ ಮೀನುಗಾರಿಕಾ ಬಂದರನ್ನು ಸೀಲ್ಡೌನ್ ಮಾಡಲಾಗಿದೆ.
ಮಂಗಳೂರಿನ ಕಂಕನಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯಲ್ಲಿ ಸೋಂಕು ಇರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ರೋಗಿಯ ತಪಾಸಣೆ, ಚಿಕಿತ್ಸೆ ನೀಡಿದ್ದ ಆಸ್ಪತ್ರೆಯ ಸುಮಾರು 35 ವೈದ್ಯ-ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಮಂಗಳೂರು ನಿವಾಸಿಯಾದ 49 ವರ್ಷದ ವ್ಯಕ್ತಿಯು ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ. ಈತ ಬಹುದಿನಗಳಿಂದ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ನಿರಂತರವಾಗಿ ಚಿಕಿತ್ಸೆಗೆ ಇದೇ ಆಸ್ಪತ್ರೆಗೆ ದಾಖಲಾಗುತ್ತಿದ್ದ. ಈ ರೋಗಿಯು ಎಂದಿನಂತೆಯೇ ಶುಕ್ರವಾರ ಕೂಡ ಆಸ್ಪತ್ರೆಗೆ ದಾಖಲಾದಾಗ ಇವರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿತ್ತು. ಆರೋಗ್ಯ ಇಲಾಖೆ ಪ್ರಕಟಿಸಿದ ವರದಿಯಲ್ಲಿ ಈತನದ್ದು ಪಾಸಿಟಿವ್ ಎಂದು ಬಂದಿದೆ.
ಇನ್ನೊಂದೆಡೆ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿಗೆ ಕೊರೊನಾ ಬಂದಿರುವ ಹಿನ್ನೆಲೆ ಮತ್ತು ಹಲವರಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡಿದ್ದರಿಂದ, ಮಂಗಳೂರು ಮೀನುಗಾರಿಕೆ ಬಂದರನ್ನು ಸೀಲ್ ಡೌನ್ ಮಾಡಲಾಗಿದೆ.ಮೀನುಗಾರಿಕೆ ತೆರಳುವ ಪ್ರದೇಶವನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ.