ಮಂಗಳೂರು: ಮಂಗಳೂರು ಸೆನ್(ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ) ಪೊಲೀಸರು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ 132 ಕೆಜಿ ಗಾಂಜಾ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ. ಬಂಟ್ವಾಳದ ತೌಡುಗೋಳಿಯ ರಮೀಜ್ ರಾಜಾ ಮತ್ತು ಕೇರಳದ ಮಂಜೇಶ್ವರದ ಅಬ್ದುಲ್ ಖಾದರ್ ಹ್ಯಾರಿಸ್ ಬಂಧಿತರು.
ಮಂಗಳೂರಿನ ಮುಡಿಪುವಿನ ಕಾಯರಗೋಳಿ ಎಂಬಲ್ಲಿ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಮಂಗಳೂರಿನ ಸೆನ್ ಪೊಲೀಸರು ದಾಳಿ ನಡೆಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಂದ ಸಂಸ್ಕರಿತ 132 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ತಲಾ 2 ಕೆ ಜಿ ಯಂತೆ ಪ್ಯಾಕ್ ಮಾಡಿ ಕಾರಿನಲ್ಲಿ ಸಾಗಿಸುತ್ತಿದ್ದರು.ಇದರ ಮಾಹಿತಿ ಪಡೆದ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಪಿ ಎಸ್ ಐ ರಾಜೇಂದ್ರ ಬಿ ನೇತೃತ್ವದಲ್ಲಿ ದಾಳಿ ನಡೆಸಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
132 ಕೆಜಿ ಗಾಂಜಾ, ಕೇರಳ ರಿಜಿಸ್ಟ್ರೇಶನ್ ಕಾರು ಮತ್ತು ಮೂರು ಮಾರಾಕಾಸ್ತ್ರ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಗಾಂಜಾ ಸೇರಿದಂತೆ ವಶಪಡಿಸಿಕೊಂಡ ಸಾಮಾಗ್ರಿಗಳ ಮೌಲ್ಯ ರೂ 39,15 ,000 ಎಂದು ಅಂದಾಜಿಸಲಾಗಿದೆ. ಆಂಧ್ರಪ್ರದೇಶ ಮತ್ತು ಒಡಿಶಾದ ನಕ್ಸಲ್ ಪೀಡಿತ ಪ್ರದೇಶವಾಗಿರುವ ವಿಶಾಖಪಟ್ಟಣದ ಕಾಡಿನ ಪ್ರದೇಶದಲ್ಲಿ ಬೆಳೆದು ಸಂಸ್ಕರಿಸಿದ ಗಾಂಜಾವನ್ನು ರಮೀಜ್ ರಾಜಾ ತಂದು ತನ್ನ ತೌಡುಗೋಳಿಯ ಮನೆಯಲ್ಲಿ ಶೇಖರಿಸಿದ್ದ. ಈತ ಅಬ್ದುಲ್ ಖಾದರ್ ಹ್ಯಾರಿಸ್ನೊಂದಿಗೆ ಗಾಂಜಾವನ್ನು ಪೆಡ್ಲರ್ಗಳಿಗೆ ಸಾಗಿಸುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ.
ಗಾಂಜಾ ಬೆಳೆದಿರುವ ಜಾಗ ಮತ್ತು ಆರೋಪಿಗಳಿಗೆ ನೀಡಿದವರು ಮತ್ತು ಆರೋಪಿಗಳಿಂದ ಖರೀದಿಸುತ್ತಿದ್ದವರ ಬಗ್ಗೆ ತನಿಖೆ ಮುಂದುವರಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ. ಆರೋಪಿ ರಮೀಜ್ ರಾಜ್ ವಿರುದ್ದ ಮಂಗಳೂರಿನ ವಿವಿಧ ಠಾಣೆಯಲ್ಲಿ 6 ಪ್ರಕರಣ ಮತ್ತು ಅಬ್ದುಲ್ ಖಾದರ್ ಹ್ಯಾರಿಸ್ನ ವಿರುದ್ದ ಕೇರಳದ ಮಂಜೇಶ್ವರದಲ್ಲಿ ಎರಡು ಪ್ರಕರಣ ಸೇರಿದಂತೆ ನಾಲ್ಕು ಪ್ರಕರಣ ದಾಖಲಾಗಿದೆ.
ಇನ್ನಷ್ಟು ತನಿಖೆ ಮುಂದುವರಿಸಲಾಗುತ್ತಿದ್ದು, ಆರೋಪಿಗಳು ಮಂಗಳೂರು, ಉಡುಪಿ, ಮಣಿಪಾಲ ಕೇರಳದ ಕಾಸರಗೋಡು ಸೇರಿದಂತೆ ಹಲವೆಡೆ ಗಾಂಜಾ ಸಾಗಿಸುತ್ತಿದ್ದರು ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಇದನ್ನು ಓದಿ ; ನಕಲಿ ಗನ್ ಲೈಸನ್ಸ್ ಸೃಷ್ಟಿಸಿ ಮಾರಾಟ: ಏಳು ಮಂದಿ ಬಂಧನ