ಮಂಗಳೂರು: ದಿನೇ ದಿನೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ. ಕೊರೊನಾ ಸಂಕಷ್ಟದ ನಡುವೆಯೂ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸುವ ಪ್ರಕ್ರಿಯೆಗಳನ್ನು ಮಾಡಬೇಕಾಗಿದೆ. ಮಂಗಳೂರಿನಲ್ಲಿ ಈ ಪ್ರಕ್ರಿಯೆಯನ್ನು ಮುನ್ನೆಚ್ಚರಿಕೆಯೊಂದಿಗೆ ಮಾಡಲಾಗುತ್ತಿದೆ.
ಕೊರೊನಾ ಬಂದ ಬಳಿಕ ಆರೋಪಿಗಳನ್ನು ಬಂಧಿಸುವ ಪ್ರಕ್ರಿಯೆ ಮುನ್ನೆಚ್ಚರಿಕೆಯಿಂದ ಮಾಡಬೇಕಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರು ರೋಗಿಗಳೊಂದಿಗೆ ಯಾವ ರೀತಿ ಇರುತ್ತಾರೋ ಅದೇ ರೀತಿಯಲ್ಲಿ ಪೊಲೀಸರು ಆರೋಪಿಗಳ ಜತೆಗೆ ಪ್ರಾಥಮಿಕ ಸಂಪರ್ಕದಲ್ಲಿರುತ್ತಾರೆ. ಆರೋಪಿಗಳನ್ನು ಬಂಧಿಸುವ ವೇಳೆ ಕೊರೊನಾ ಸೋಂಕು ತಗುಲುವ ಸಾಧ್ಯತೆಗಳಿರುತ್ತದೆ. ಈ ಕಾರಣದಿಂದ ಮುನ್ನೆಚ್ಚರಿಕೆಯೊಂದಿಗೆ ಕೆಲಸ ಮಾಡಬೇಕಾಗುತ್ತದೆ.
ಆರೋಪಿಗಳನ್ನು ಬಂಧಿಸಿದ ತಕ್ಷಣ ಅವರಿಗೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಲಾಗುತ್ತದೆ. ಆ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಒಂದು ವೇಳೆ, ಪಾಸಿಟಿವ್ ಬಂದರೆ ಅವರಿಗೆ ಚಿಕಿತ್ಸಾ ವ್ಯವಸ್ಥೆ ಮಾಡಬೇಕಾಗುತ್ತದೆ.
ಮಂಗಳೂರಿನಲ್ಲಿ ಇತ್ತೀಚೆಗೆ ಅಪಹರಣ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಆತನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಆದರೆ, ಮಂಗಳೂರಿನಲ್ಲಿ ಈವರೆಗೆ ಆರೋಪಿಗಳನ್ನು ಬಂಧಿಸಿದ ಕಾರಣದಿಂದ ಪೊಲೀಸರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಘಟನೆ ನಡೆದಿಲ್ಲ.
ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಹಿಂಜರಿಕೆ ಮಾಡಿಲ್ಲ. ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಮೂಲಕ ಮುನ್ನೆಚ್ಚರಿಕೆ ತೆಗೆದುಕೊಂಡು ಆರೋಪಿಗಳ ಬಂಧನ ಪ್ರಕ್ರಿಯೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ತುರ್ತು ಪ್ರಕರಣದಲ್ಲಿ ಆರೋಪಿಗಳು ಹೊರ ರಾಜ್ಯದಲ್ಲಿದ್ದರೂ ಬಂಧನ ಪ್ರಕ್ರಿಯೆ ನಡೆಯುತ್ತಿದೆ. ಆದರೆ ತುರ್ತು ಇಲ್ಲದೇ ಇರುವ ಪ್ರಕರಣದಲ್ಲಿ ಆರೋಪಿಗಳು ಹೊರರಾಜ್ಯದಲ್ಲಿದ್ದರೆ ಅಂತಹ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗುತ್ತಿದೆ.
ಇದನ್ನೂ ಓದಿ: ಕೊರೊನಾ ಕರ್ಫ್ಯೂಗೆ ಬೆಳ್ತಂಗಡಿಯಲ್ಲಿ ಉತ್ತಮ ಸ್ಪಂದನೆ
ಆರೋಪಿಗಳನ್ನು ಬಂಧಿಸಿ ಅವರ ಕೊರೊನಾ ಟೆಸ್ಟ್ ರಿಪೋರ್ಟ್ ಬರುವವರೆಗೂ ಆರೋಪಿಗಳನ್ನು ಸ್ಟೇಷನ್ನಲ್ಲಿ ಕೂಡ ಇತರರ ಜತೆಗೆ ಸಂಪರ್ಕಿಸದಂತೆ ಜಾಗರೂಕತೆ ವಹಿಸಲಾಗುತ್ತಿದೆ. ಒಟ್ಟಿನಲ್ಲಿ ಕೊರೊನಾ ಮಹಾಮಾರಿ ಬಂದ ಬಳಿಕ ಮುನ್ನೆಚ್ಚರಿಕೆಯೊಂದಿಗೆ ಪೊಲೀಸರು ಆರೋಪಿಗಳ ಬಂಧನ ಪ್ರಕ್ರಿಯೆ ನಡೆಸುತ್ತಿದ್ದಾರೆ.