ಮಂಗಳೂರು: ಕೋವಿಡ್ ಲಾಕ್ಡೌನ್ ಬಗ್ಗೆ ಮಂಗಳೂರು ನಾಗರಿಕರ ಗೊಂದಲಗಳಿಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಸ್ಪಷ್ಟನೆ ನೀಡಿದ್ದಾರೆ.
ಬೆಳಗ್ಗೆ 6 ರಿಂದ 9 ರವರೆಗೆ ಲಾಕ್ಡೌನ್ ಸಡಿಲಿಕೆ ಇರುವ ಸಂದರ್ಭ ಅಗತ್ಯ ವಸ್ತುಗಳ ಖರೀದಿಗೆ ವಾಹನಗಳಲ್ಲಿ ತೆರಳಬಹುದೇ ಎಂಬುದರ ಬಗ್ಗೆ ಸಾಕಷ್ಟು ಮಂದಿಯಲ್ಲಿ ಗೊಂದಲಗಳಿವೆ. ಸಾಧ್ಯವಾದಷ್ಟು ತಮ್ಮ ಮನೆಗೆ ಹತ್ತಿರ ಇರುವ ಅಂಗಡಿಗಳಲ್ಲೇ ಅಗತ್ಯ ವಸ್ತುಗಳನ್ನು ಖರೀದಿಸಿ ಎಂದು ಸೂಚನೆ ನೀಡಿರುವ ಪೊಲೀಸ್ ಆಯುಕ್ತರು, ಅನಿವಾರ್ಯತೆ ಸಂದರ್ಭದಲ್ಲಿ ಮಾತ್ರ ವಾಹನಗಳನ್ನು ಬಳಸಿ ಎಂದು ಹೇಳಿದ್ದಾರೆ.
ಆಹಾರ ಪಾರ್ಸೆಲ್‌ಗಳನ್ನು ಖರೀದಿಸಲು ಯಾವುದೇ ವಾಹನಗಳನ್ನು ಬಳಸುವಂತಿಲ್ಲ ಎಂದು ಕೋವಿಡ್ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆದ್ದರಿಂದ ವಾಹನಗಳನ್ನು ಆಹಾರ ಪಾರ್ಸೆಲ್ ತರಲು ಬಳಸಲು ಅನುಮತಿಸಲಾಗುವುದಿಲ್ಲ ಎಂದಿದ್ದಾರೆ.
ಮಂಗಳೂರು ನಗರ ಹಾಗೂ ಹೊರವಲಯದಲ್ಲಿನ ಬೃಹತ್ ಕೈಗಾರಿಕಾ ಸಂಸ್ಥೆಗಳ ನೌಕರರ ಸಂಚಾರಕ್ಕೆ ಕೈಗಾರಿಕೆಗಳ ವತಿಯಿಂದಲೇ ವಾಹನ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಲಾಗಿತ್ತು. ಆದರೆ ಅನಿವಾರ್ಯತೆ ಸಂದರ್ಭದಲ್ಲಿ ನೌಕರರು ತಮ್ಮ ಸಂಸ್ಥೆಯ ಐಡಿಯನ್ನು ಬಳಸಿ ತಮ್ಮ ಖಾಸಗಿ ವಾಹನಗಳಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಸ್ಪಷ್ಟಪಡಿಸಿದ್ದಾರೆ.