ಮಂಗಳೂರು: ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣದಲ್ಲಿ ಇಬ್ಬರು ಅಮಾಯಕರನ್ನು ಹತ್ಯೆಮಾಡಿದ ಪೊಲೀಸರ ಮೇಲೆ ಕೊಲೆ ಕೇಸ್ ದಾಖಲಿಸಿ, ಅಮಾನತುಗೊಳಿಸಲಿ ಎಂದು ಡಿಸೆಂಬರ್ 19 ಗೋಲಿಬಾರ್ ವಿಕ್ಟಿಮ್ಸ್ ಜಸ್ಟೀಸ್ ಫೋರಂನ ಸದಸ್ಯ ಅಬ್ದುಲ್ ಜಲೀಲ್ ಕೆ. ಆಗ್ರಹಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ನಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ಮೇಲೆ ನ್ಯಾಯಾಂಗ ತನಿಖೆ ನಡೆಯಬೇಕು. ಈ ಪ್ರಕರಣದಲ್ಲಿ ಹತ್ಯೆಯಾದ ಅಬ್ದುಲ್ ಜಲೀಲ್ ಹಾಗೂ ನೌಸೀನ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಆದ್ದರಿಂದ ಅವರ ಮೇಲಿನ ಪ್ರಕರಣವನ್ನು ತಕ್ಷಣ ಕೈಬಿಡಬೇಕು. ಜೊತೆಗೆ ಪೊಲೀಸರು ನಿರಂತರವಾಗಿ ಅಮಾಯಕರ ಮೇಲೆ ಸುಳ್ಳು ದಾಖಲೆ ಸೃಷ್ಟಿಸಿ ಪ್ರಕರಣ ದಾಖಲಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೃತರಾದ ಅಬ್ದುಲ್ ಜಲೀಲ್ ಹಾಗೂ ನೌಶೀನ್ ಕುಟುಂಬಕ್ಕೆ ತಲಾ 25ಲಕ್ಷ ರೂ. ಪರಿಹಾರ ನೀಡಬೇಕು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ತಲಾ 15ಲಕ್ಷ ರೂ. ಪರಿಹಾರವನ್ನು ಸರ್ಕಾರ ಘೋಷಣೆ ಮಾಡಬೇಕು. ಮೊಬೈಲ್ ಟವರ್ ಆಧಾರದಲ್ಲಿ ಕೇರಳದ ನಾಗರಿಕರಿಗೆ ಪೊಲೀಸರು ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾಕಷ್ಟು ಮಂದಿಯ ಮೇಲೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದೆ. ಈ ನೋಟೀಸ್ ಅನ್ನು ತಕ್ಷಣ ಹಿಂಪಡೆಯಬೇಕು. ಘಟನೆಯ ಬಗ್ಗೆ ಉನ್ನತಾಧಿಕಾರಿಗಳ ನೇತೃತ್ವದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಿದ್ದೇವೆ ಎಂದು ಅಬ್ದುಲ್ ಜಲೀಲ್ ಕೆ. ಎಚ್ಚರಿಸಿದರು.