ಮಂಗಳೂರು: ಕರಾವಳಿಯ ಪ್ರಮುಖ ಜಾನಪದ ಕಲೆಯಾದ ಯಕ್ಷಗಾನ ಪ್ರದರ್ಶನದ ಮೇಲೂ ಚುನಾವಣಾ ಆಯೋಗ ಹದ್ದಿನ ಕಣ್ಣಿಡಲಿದೆ.
ಚುನಾವಣಾ ಘೋಷಣೆಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದ.ಕ ಜಿಲ್ಲಾ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್, ಮಂಗಳೂರಿನಲ್ಲಿ ಚುನಾವಣೆ ಸಂದರ್ಭದಲ್ಲಿ ಯಕ್ಷಗಾನ ಪ್ರದರ್ಶನ ಮಾಡುವ ಮುನ್ನ ಆಯೋಗದ ಅನುಮತಿ ಪಡೆಯಬೇಕು. ಯಕ್ಷಗಾನವನ್ನು ಹಲವಾರು ಮಂದಿ ಪ್ರಾಯೋಜನ ಮಾಡುತ್ತಾರೆ. ಅದರಲ್ಲಿ ಹಲವರಿಗೆ ರಾಜಕೀಯದ ಲಿಂಕ್ ಇರುತ್ತದೆ. ಈ ರಾಜಕೀಯ ಲಿಂಕ್ ಇರುವ ಬಗ್ಗೆ ಆಯೋಗ ಗಮನ ಹರಿಸುತ್ತೆ. ಯಕ್ಷಗಾನ ಪ್ರದರ್ಶನದ ವೇಳೆ ಊಟದ ವ್ಯವಸ್ಥೆ ಮಾಡಿ ಯಾವುದಾದರೂ ರಾಜಕೀಯ ಪಕ್ಷದ ನಾಯಕರು ನಮಗೆ ಮತ ನೀಡಿ ಅಂದರೆ, ನೀತಿ ಸಂಹಿತೆ ಉಲ್ಲಂಘನೆ ಆಗಲಿದೆ. ಈ ಕಾರಣದಿಂದ ಚುನಾವಣಾ ಸಂದರ್ಭದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ಅಗತ್ಯ ಎಂದರು.
ಚುನಾವಣಾ ಆಯೋಗ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪ್ರಚಾರದ ಲೆಕ್ಕವನ್ನು ಅಭ್ಯರ್ಥಿಗಳ ಲೆಕ್ಕಕ್ಕೆ ಹಾಕಲಾಗುವುದು. ಒಂದು ವೇಳೆ ಅಭ್ಯರ್ಥಿ ಅದಕ್ಕೂ ನಮಗೆ ಸಂಬಂಧವಿಲ್ಲ ಎಂದರೆ ಯಾರು ಫೇಸ್ಬುಕ್, ವಾಟ್ಸ್ಯಾಪ್ನಲ್ಲಿ ಪ್ರಚಾರ ಮಾಡಿದ್ದರೋ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.
ಮಂಗಳೂರಲ್ಲಿ ಏ.18 ರಂದು ಚುನಾವಣೆ ನಡೆಯಲಿದ್ದು, ಮೇ 23 ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ಪ್ರಕ್ರಿಯೆ ಆರಂಭವಾಗುವ ಮಾರ್ಚ್ 19 ರವರೆಗೆ ಹೊಸ ಮತದಾರರು ಸೇರ್ಪಡೆಯಾಗಬಹುದು. 2019 ಜನವರಿ 1 ರವರೆಗೆ 16,97,417 ಮತದಾರರಿದ್ದಾರೆ. 2014 ರ ಮತದಾರರಿಗಿಂತ 1,33,303 ಮಂದಿ ಮತದಾರರು ಹೆಚ್ಚಾಗಿದ್ದಾರೆ. ಈ ಬಾರಿ 1861 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್, ಈಗಾಗಲೇ ರೌಡಿ ಶೀಟರ್ಗಳನ್ನು ಗುರುತಿಸಿ ಎಚ್ಚರಿಕೆ ನೀಡಲಾಗಿದೆ. ಇದರಲ್ಲಿ ಮೂವರನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದರು.
ಬಳಿಕ ಎಸ್ಪಿ ಲಕ್ಷ್ಮೀ ಪ್ರಸಾದ್ ಮಾತನಾಡಿ, ಈಗಾಗಲೇ 46 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದ್ದು, ಚುನಾವಣೆ ಶಾಂತಿಯುತವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.