ಮಂಗಳೂರು : ನಗರದಲ್ಲಿ ಪೊಲೀಸ್ ಮೇಲೆ ಹಲ್ಲೆ ನಡೆಸಿರುವ ತಂಡದಲ್ಲಿ 'ಮಾಯಾಗ್ಯಾಂಗ್' ಅಲ್ಲದೆ 'ಕಾರ್ಕಾನ ಗ್ಯಾಂಗ್'ನ ಕೈವಾಡ ಕೂಡ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಗುಂಪಿನ ಮೂವರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಕಾರ್ಕಾನ ಗ್ಯಾಂಗ್ನ ಸದಸ್ಯರು ಮಾಯಾಗ್ಯಾಂಗ್‌ನ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮಾಹಿತಿ ನೀಡಿದರು.
ಪ್ರಕರಣದ ಹಿನ್ನೆಲೆ : ಬಂದರು ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಗಣೇಶ್ ಕಾಮತ್ ಅವರ ಮೇಲೆ ಡಿ.16ರಂದು ನಗರದ ನ್ಯೂಚಿತ್ರಾ ಟಾಕೀಸ್ ಬಳಿ ಅಪ್ರಾಪ್ತ ಬಾಲಕನೋರ್ವ ದಾಳಿ ನಡೆಸಿದ್ದ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳಲ್ಲಿ ಇಬ್ಬರನ್ನು ವಶಪಡಿಸಿಕೊಂಡು ತನಿಖೆ ನಡೆಸಿದ ಸಂದರ್ಭದಲ್ಲಿ 'ಮಾಯಾ ಗ್ಯಾಂಗ್' ಎಂಬ ತಂಡದ ಆರು ಮಂದಿ ಈ ಕೃತ್ಯದಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ದೊರಕಿತ್ತು.
ಈಗ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರು ಕಾರ್ಕಾನ ಗ್ಯಾಂಗ್ ಸದಸ್ಯರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಪ್ರಕರಣದಲ್ಲಿ ಮೊದಲು ಬಂಧಿತನಾದ ನವಾಝ್ ಹಾಗೂ ಮೊನ್ನೆ ಬಂಧಿತನಾದ ಫಾಯಿಝ್ ಎಂಬ ಇಬ್ಬರಿಂದ ಈ ಎರಡೂ ಗ್ಯಾಂಗ್ಗಳು ಒಂದಾಗಿ ಈ ದುಷ್ಕೃತ್ಯ ನಡೆಸಲು ಸಂಚು ಹೂಡಿವೆ. ಒಬ್ಬೊಬ್ಬರೇ ಇರುವ ಪೊಲೀಸರ ಮೇಲೆ ದಾಳಿ ನಡೆಸುವ ಬಗ್ಗೆ ಸಂಚು ರೂಪಿಸಿದ್ದರು. ಇಂತಹ ಮೂರು ನಾಲ್ಕು ಕಡೆಗಳಲ್ಲಿ ಪೊಲೀಸ್ ಮೇಲೆ ದಾಳಿ ನಡೆಸುವ ಬಗ್ಗೆಯೂ ಸಂಚು ರೂಪಿಸಿದ್ದರೆಂದು ತನಿಖೆಯ ವೇಳೆ ಸ್ಪಷ್ಟವಾಗಿದೆ ಎಂದರು.
ಆರೋಪಿಗಳ ಬಳಿ ಇನ್ನೂ ಹಲವಾರು ತೀಕ್ಷ್ಣವಾದ ಆಯುಧಗಳು ಇದ್ದವು ಎಂಬ ಮಾಹಿತಿಯೂ ನಮಗೆ ದೊರೆತಿದೆ. ಬಂಧಿತರಾದಾಗ ಏನು ಮಾಡಬೇಕು, ಜೈಲಿಗೆ ಹೋದಾಗ ಯಾವ ರೀತಿ ಇರಬೇಕು, ಯಾವ ಕೊಠಡಿಯಲ್ಲಿ ಇರಬೇಕು ಎಂಬ ವಿಚಾರಗಳ ಬಗ್ಗೆಯೂ ಹಿಂದೆಯೇ ಅವರ ನಡುವೆ ಚರ್ಚೆಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿವೆ.
ಈ ಹಿನ್ನೆಲೆಯಾಗಿರಿಸಿಕೊಂಡು ತನಿಖೆ ನಡೆಸಲಾಗುತ್ತದೆ. ಸಾರ್ವಜನಿಕರ ಆಸ್ತಿ-ಪಾಸ್ತಿ, ಮಾನ-ಪ್ರಾಣ ರಕ್ಷಿಸುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ಕಿಡಿಗೇಡಿಗಳು ಯಾರೂ ಕೂಡ ಪೊಲೀಸ್ ಮೇಲೆ ದಾಳಿ ನಡೆಸುವ ದುಃಸಾಹಸಕ್ಕೆ ಕೈಹಾಕಬಾರದು. ಪೊಲೀಸ್ ಸಿಬ್ಬಂದಿಯಿಂದ ದುರ್ವರ್ತನೆ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸದ್ಯಕ್ಕೆ ಈ ಪ್ರಕರಣವನ್ನು ಸಿಐಡಿ ಅಥವಾ ಇನ್ನಿತರ ತನಿಖಾ ತಂಡದ ಮೂಲಕ ತನಿಖೆ ನಡೆಸುವ ಚಿಂತನೆಯಿಲ್ಲ. ಆದರೆ, ಕೆಲ ಮಾಧ್ಯಮಗಳಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯ ಅಗತ್ಯವಿದೆ. ಆದ್ದರಿಂದ ವಿಶೇಷ ತನಿಖಾ ತಂಡಕ್ಕೆ ಪ್ರಕರಣದ ತನಿಖೆ ನಡೆಸುವ ಅಗತ್ಯವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಂತಹ ಅವಶ್ಯಕತೆ ಕಂಡು ಬಂದಲ್ಲಿ ಮೇಲಾಧಿಕಾರಿಗಳೇ ನಮಗೆ ಸೂಚನೆ ನೀಡುತ್ತಾರೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.