ಮಂಗಳೂರು: ಪೊಲೀಸ್ ಇಲಾಖೆಯಲ್ಲಿರುವವರ ದೇಹದ ತೂಕವನ್ನು ಹತೋಟಿಗೆ ತರುವ ಉದ್ದೇಶದಿಂದ ದೈಹಿಕ ಸಾಮರ್ಥ್ಯ ಬಲವರ್ಧನೆ ಹಾಗೂ ದೈಹಿಕ ಸದೃಢತಾ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಯಾವತ್ತೂ ಕರ್ತವ್ಯ ಎಂದು ಬ್ಯುಸಿ ಇರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ಡಿಸಿಪಿ ಸಖತ್ ಸ್ಟೆಪ್ ಹಾಕಿ ಎಲ್ಲರನ್ನೂ ಮೋಡಿ ಮಾಡಿದರು.
ನಿನ್ನೆ ನಡೆದ ಕಾರ್ಯಕ್ರಮದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹಾಗೂ ಡಿಸಿಪಿ ಹರಿರಾಂ ಶಂಕರ್ ಸಖತ್ ಸ್ಟೇಪ್ ಹಾಕಿ ಕುಣಿದಿದ್ದಾರೆ. 'ದಿಯಾ' ಸಿನಿಮಾ ಖ್ಯಾತಿಯ ನಟ ಪೃಥ್ವಿ ಅಂಬರ್ ಹಾಗೂ ಡ್ಯಾನ್ಸ್ ತಂಡದೊಂದಿಗೆ ತುಳುವಿನ 'ಥಾಸೆದ ಪೆಟ್ಟ್ಗ್ ಊರುದ ಪಿಲಿಕುಲು ನಲಿಪುನ ಪೊರ್ಲು ತೂಯನಾ', 'ಲುಂಗಿ ಡ್ಯಾನ್ಸ್' ಹಾಗೂ ಇನ್ನಿತರ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ.
ಪೊಲೀಸ್ ಅಧಿಕಾರಿಗಳಿಬ್ಬರ ಕುಣಿತಕ್ಕೆ ಪ್ರೋತ್ಸಾಹದ ರೀತಿ ವೇದಿಕೆ ಕೆಳಗಿನಿಂದ ಎಲ್ಲರೂ ಹುಚ್ಚೆದ್ದು ಬೊಬ್ಬೆ ಹಾಕುವುದು ಕಂಡು ಬಂದಿತ್ತು. ಒಟ್ಟಿನಲ್ಲಿ ಕಾರ್ಯಕ್ರಮದಲ್ಲಿ ಯುವ ಉತ್ಸಾಹಿ ಪೊಲೀಸ್ ಕಮಿಷನರ್ ಹಾಗೂ ಡಿಸಿಪಿ ಜೋಡಿ ಎಲ್ಲರಿಗೂ ಮೋಡಿ ಮಾಡಿದ್ದಂತೂ ನಿಜ.
ಬೊಮ್ಮಾಯಿ ಮೆಚ್ಚುಗೆ
ಸಿವಿಲ್ ಪೊಲೀಸ್ ಮಟ್ಟದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೇತೃತ್ವದ ಪೊಲೀಸ್ ತಂಡ ದೇಹದ ತೂಕ ಇಳಿಸಿ ಹೆಚ್ಚು ಯಶಸ್ವಿಯಾಗಿದೆ ಎಂದು ರಾಜ್ಯ ಗೃಹಸಚಿವ ಬಸವರಾಜ್ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಪಂಪ್ವೆಲ್ನಲ್ಲಿರುವ ಫಾದರ್ ಮುಲ್ಲರ್ ಕನ್ವೆನ್ಶನ್ ಸಭಾಂಗಣದಲ್ಲಿ ನಡೆದ ಮಂಗಳೂರು ನಗರದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ದೈಹಿಕ ಸಾಮರ್ಥ್ಯ ಬಲವರ್ಧನೆ ಹಾಗೂ ದೈಹಿಕ ಸುದೃಢತಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸುಮಾರು 76 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪತಂಜಲಿ ಯೋಗ ಶಿಬಿರದ ಮುಖೇನ 1.4 ಕೆಜಿಯಿಂದ 10.4 ಕೆಜಿವರೆಗೂ ದೇಹದ ತೂಕ ಕರಗಿಸಿ ದಾಖಲೆ ನಿರ್ಮಿಸಿದ್ದಾರೆ ಎಂದು ಹೇಳಿದರು.
ವಯಸ್ಸಾದಂತೆ ಎಲ್ಲರಲ್ಲೂ ತೂಕ ಹೆಚ್ಚಳವಾಗೋದು, ದೈಹಿಕವಾಗಿ ದಣಿವು ಹೆಚ್ಚೋದು ಸಾಮಾನ್ಯ. ಇಚ್ಛಾಶಕ್ತಿ ಇರುವವರು ಅದನ್ನು ಕಠಿಣ ಪರಿಶ್ರಮದಿಂದ ಹತೋಟಿಗೆ ತರುವ ಕೆಲಸ ಮಾಡುತ್ತಾರೆ. ವಿಶೇಷವಾಗಿ ಪೊಲೀಸ್ ಇಲಾಖೆಯಲ್ಲಿ ಇರುವವರಿಗೆ ಅತೀ ಹೆಚ್ಚು ತೂಕ ಇದ್ದಲ್ಲಿ ಸರಿಯಾಗಿ ಕೆಲಸ ನಿರ್ವಹಿಸಲು ಅಡಚಣೆ ಉಂಟು ಮಾಡುತ್ತದೆ. ಇದೀಗ ದೇಹದ ತೂಕ ಕಡಿಮೆ ಮಾಡಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದನ್ನು ಸರಿಯಾಗಿ ನಿರ್ವಹಿಸಿಕೊಂಡು ಮತ್ತೆ ದೇಹದ ತೂಕ ಹೆಚ್ಚಳವಾಗದಂತೆ ಹೋಗಬೇಕು. ಯೋಗ ಶಿಬಿರದಲ್ಲಿ ಕಲಿತಿರುವ ಪ್ರಯೋಗಗಳನ್ನು ನಿರಂತರವಾಗಿ ಮಾಡುತ್ತಾ ಬಂದಲ್ಲಿ ದೇಹದ ತೂಕ ಹೆಚ್ಚಳವಾಗದಂತೆ ನಿರ್ವಹಿಸಲು ಸಾಧ್ಯ. ಆದ್ದರಿಂದ ಮುಂದಿನ ದಿನಗಳಲ್ಲಿ ಡಿಜಿಯಿಂದ ಒಳಗೊಂಡು ಎಲ್ಲ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ಈ ಪ್ರಯೋಗ ಮಾಡುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ಮತ್ತಿತರರು ಉಪಸ್ಥಿತರಿದ್ದರು.