ಮಂಗಳೂರು(ದಕ್ಷಿಣ ಕನ್ನಡ): ನಗರದ ಗರೋಡಿಯಲ್ಲಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ಗುಣಮುಖ ಆದ ತಕ್ಷಣ ವಶಕ್ಕೆ ಪಡೆಯುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾರೀಕ್ ಹಾಗೂ ಆಟೋ ಚಾಲಕ ಪುರುಷೋತ್ತಮ್ ಇಬ್ಬರಿಗೂ ಚಿಕಿತ್ಸೆ ಮುಂದುವರಿದಿದೆ. ಪುರುಷೋತ್ತಮ್ ಆರೋಗ್ಯ ಸ್ಥಿರವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿದ್ದಾರೆ. ಅವರ ದೇಹದ ಅಂಗಾಗಗಳ ಸ್ಥಿತಿಯೂ ಸ್ಥಿರವಾಗಿದೆ. ಕುಟುಂಬ ಸದಸ್ಯರೂ ಅವರೊಂದಿಗಿದ್ದಾರೆ. ಜೊತೆಗೆ ಶಾರೀಕ್ನಲ್ಲಿಯೂ ಬಹಳಷ್ಟು ಮಾಹಿತಿ ಇರುವುದರಿಂದ ಆತನಿಗೂ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆತ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಪೊಲೀಸ್ ವಿಚಾರಣೆಗಾಗಿ ಪ್ರಶ್ನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ಆತನ ಆರೋಗ್ಯದ ಬಗ್ಗೆ ವೈದ್ಯರು ಸ್ಪಷ್ಟವಾಗಿ ಹೇಳಿಲ್ಲ. ಆತ ಯಾವಾಗ ಪ್ರಶ್ನೆಗೆ ಉತ್ತರ ನೀಡಲು ಶಕ್ತನಾಗುತ್ತಾನೆ ಎಂಬುದನ್ನು ಗಮನಿಸಿ ವಶಕ್ಕೆ ಪಡೆಯುತ್ತೇವೆ ಎಂದು ತಿಳಿಸಿದರು.
ರಿಕ್ಷಾ ಚಾಲಕ ಪುರುಷೋತ್ತಮ ಅವರಿಗೆ ಪರಿಹಾರ ನೀಡುವ ಬಗ್ಗೆ ಈಗಾಗಲೇ ತಹಶೀಲ್ದಾರ್ ಬಂದು ಮಾಹಿತಿ ಪಡೆದು ತೆರಳಿದ್ದಾರೆ. ಜಿಲ್ಲಾಧಿಕಾರಿಯವರು ಸರ್ಕಾರದೊಂದಿಗೆ ಮಾತನಾಡಿ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್.. ಶಾರಿಕ್ನೊಂದಿಗೆ ಸಂಪರ್ಕದಲ್ಲಿದ್ದ ಮಹಮದ್ ರುಹುಲ್ಲಾ ವಶಕ್ಕೆ