ಮಂಗಳೂರು: 2019ರ ಜನವರಿಯಲ್ಲಿ ಮಹಿಳೆಯೊಬ್ಬರಿಗೆ ವಿಮಾನದಲ್ಲಿ ಹೃದಯಾಘಾತವಾದಾಗ ಚಿಕಿತ್ಸೆ ನೀಡಿದ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಂಗಳೂರು ಮೂಲದ ವೈದ್ಯ ಡಾ. ಎ.ಕೆ.ಖಾಸಿಂ (51) ಮೆಕ್ಕಾದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕೇರಳದ ಉಪ್ಪಳದವರಾದ ಡಾ. ಎ.ಕೆ.ಖಾಸಿಂ ಮಂಗಳೂರಿನ ಫಳ್ನೀರ್ನಲ್ಲಿ ಬಹಳ ವರ್ಷಗಳ ಹಿಂದಿನಿಂದಲೂ ಮನೆ ಮಾಡಿಕೊಂಡಿದ್ದರು. ಸೌದಿ ಅರೇಬಿಯಾದ ಮೆಕ್ಕಾ ನಗರದ ಝಹ್ರತುಲ್ ಕುದಾಯಿ ಏಷಿಯನ್ ಪಾಲಿ ಕ್ಲಿನಿಕ್ ಆಸ್ಪತ್ರೆಯಲ್ಲಿ ಇವರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ ಇವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಖಾಸಿಂ ಅವರು ಕಳೆದ 26 ವರ್ಷಗಳಿಂದ ಉಪ್ಪಳ, ಮಂಗಳೂರು, ಸೌದಿ ಅರೇಬಿಯಾದಲ್ಲಿ ವೈದ್ಯಕೀಯ ಸೇವೆ ಮಾಡಿದ್ದರು. ಖಾಸಿಂ ಅವರು ಸಾಮಾಜಿಕ ಸೇವೆ ಮಾಡುತ್ತಿರುವ ಮಂಗಳೂರು ಎಂ ಫ್ರೆಂಡ್ಸ್ ಟ್ರಸ್ಟ್ನ ಎನ್ಆರ್ಐ ಸದಸ್ಯರಾಗಿದ್ದರು.
2019ರ ಜನವರಿಯಲ್ಲಿ ಸೌದಿಯಿಂದ ಊರಿಗೆ ಬರುವ ಸಂದರ್ಭದಲ್ಲಿ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಮುಂಬೈ ಮೂಲದ ಮಹಿಳೆಗೆ ಹೃದಯಾಘಾತವಾಗಿತ್ತು. ಈ ಸಂದರ್ಭದಲ್ಲಿ ಖಾಸಿಂ ಅವರು ವಿಮಾನದಲ್ಲಿಯೇ ಚಿಕಿತ್ಸೆ ನೀಡಿ ಮಹಿಳೆಯನ್ನು ಬದುಕಿಸಿದ್ದರು.
ಓದಿ: ಫೇಸ್‌ಬುಕ್‌ನಲ್ಲಿ ಆರೋಪಿಯನ್ನು ಗುರುತಿಸಿದ ಅತ್ಯಾಚಾರ ಸಂತ್ರಸ್ತೆ : 17 ವರ್ಷಗಳ ಬಳಿಕ ಕೇಸ್ ದಾಖಲು