ಉಳ್ಳಾಲ(ದಕ್ಷಿಣ ಕನ್ನಡ) : ರಕ್ತದೊತ್ತಡ ತಪಾಸಣೆಗೆಂದು ನಗರದ ಖಾಸಗಿ ಆಸ್ಪತ್ರೆಗೆ ಸ್ನೇಹಿತರ ಜೊತೆಗೆ ತೆರಳಿದ್ದ ಯುವಕ ವೈದ್ಯರು ಬಿಪಿ ಚೆಕ್ ಮಾಡುವಷ್ಟರಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಕುಂಪಲ ಆಶ್ರಯ ಕಾಲೋನಿ ನಿವಾಸಿ ರಾಜೇಶ್ ರಾವ್ (31) ಹೃದಯಾಘಾತಕ್ಕೆ ಬಲಿಯಾದ ಯುವಕ.
ರಾಜೇಶ್ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಶುಕ್ರವಾರ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ತಪಾಸಣೆಗೆ ತೆರಳಿದ್ದರು. ವೈದ್ಯರು ಮತ್ತೆ ಸೋಮವಾರ ತಪಾಸಣೆಗೆ ಬರಲು ತಿಳಿಸಿದ್ದರಂತೆ. ಅದರಂತೆ ಇಂದು ಬೆಳಗ್ಗೆ ರಾಜೇಶ್ ಅವರ ಸ್ನೇಹಿತರಾದ ಪ್ರಕಾಶ್ ಕುಂಪಲ, ಶೈಲೇಶ್ ಮೊದಲಾದವರು ರಾಜೇಶನ್ನು ನಗರದ ಕೆಎಂಸಿ ಆಸ್ಪತ್ರೆಗೆ ಉನ್ನತ ತಪಾಸಣೆಗೆ ಕರೆದೊಯ್ದಿದ್ದಾರೆ.
ತಪಾಸಣೆಗೆ ತೆರಳುವಾಗ ರಾಜೇಶ್ ಅವರೇ ಕಾರು ಚಲಾಯಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ರಕ್ತದೊತ್ತಡ ತಪಾಸಣೆ ನಡೆಸುವ ವೇಳೆ ರಾಜೇಶ್ ಕುಸಿದು ಬಿದ್ದಿದ್ದು, ಸ್ನೇಹಿತರ ಮುಂದೆಯೇ ಸಾವನ್ನಪ್ಪಿದ್ದಾರೆ.
ಮೃತ ರಾಜೇಶ್ ತಂದೆ, ತಾಯಿ ಮತ್ತು ತಂಗಿಯನ್ನು ಅಗಲಿದ್ದಾರೆ. ರಾಜೇಶ್ ರಿಕ್ಷಾ ಚಾಲಕರಾಗಿದ್ದು, ಕುಂಪಲ ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಸದಸ್ಯರಾಗಿದ್ದರು. ಅಪಾರ ಸ್ನೇಹಿತರನ್ನು ಹೊಂದಿದ್ದರು. ಸ್ನೇಹಿತರೊಂದಿಗೆ ಅವರು ಸಮಾಜಮುಖಿ ಕಾರ್ಯಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದರು. ರಾಜೇಶ್ ಅಕಾಲಿಕ ಅಗಲಿಕೆಗೆ ಹಿಂದೂ ಜಾಗರಣಾ ವೇದಿಕೆ ಸಂತಾಪ ವ್ಯಕ್ತಪಡಿಸಿದೆ.