ಬೆಳ್ತಂಗಡಿ: ಮಳೆಗಾಲ ಪ್ರಾರಂಭವಾದ ಬೆನ್ನಲ್ಲೇ ಬೆಳ್ತಂಗಡಿ ತಾಲೂಕಿನಲ್ಲಿ ಡೆಂಘೀ ಜ್ವರಕ್ಕೆ ಒಬ್ಬರು ಮೃತಪಟ್ಟಿದ್ದಾರೆ.
ತಾಲೂಕಿನ ಕಡಿರುದ್ಯಾವರ ಗ್ರಾಮದ ಅಲಂದಡ್ಕ ವಿನಾಯಕ ಪ್ರಭು (65) ಎಂಬುವವರನ್ನು ಜ್ವರದ ಹಿನ್ನೆಲೆಯಲ್ಲಿ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಡೆಂಘೀ ಜ್ವರದಿಂದ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೂಲತಃ ಕೃಷಿಕರಾದ ಇವರು, ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ತಾಲೂಕಿನ ವಿವಿಧ ಕಡೆ ಡೆಂಘೀ ಪ್ರಕರಣ ಹೆಚ್ಚಾಗುವ ಆತಂಕ ಮೂಡಿದ್ದು, ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಕೊರೊನಾ ಮಹಾಮಾರಿಯಿಂದ ಭಯಭೀತರಾಗಿರುವ ಜನರಿಗೆ ಡೆಂಘೀ ಜ್ವರ ಕಂಡು ಬರುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.