ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಶತ ಶತಮಾನಗಳ ಹಿಂದೂಗಳ, ರಾಮ ಭಕ್ತರ ಕನಸಾಗಿದೆ. ಆ ಐತಿಹಾಸಿಕ ದಿನವನ್ನು ಮನೆ ಮನೆಗಳಲ್ಲಿ ಧ್ವಜ, ತಳಿರು ತೋರಣಗಳಿಂದ ಸಿಂಗರಿಸಿ ದೀಪಗಳನ್ನ ಹಚ್ಚಿ ದೀಪೋತ್ಸವದ ರೀತಿಯಲ್ಲಿ ಆಚರಿಸಲು ರಾಜ್ಯದ ಜನತೆಗೆ ವಿಎಚ್ಪಿ ಕರೆ ನೀಡಿದೆ.
ಈ ಬಗ್ಗೆ ವಿಎಚ್ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಾತನಾಡಿ, ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ವಿಎಚ್ಪಿಯ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ 1990 ಹಾಗೂ 1992 ರಲ್ಲಿ ರಾಮಜನ್ಮ ಭೂಮಿ ಹೋರಾಟಕ್ಕೆ ಕರ ಸೇವಕರಾಗಿದ್ದವರ ಜೊತೆಯಲ್ಲಿ ವಿಶೇಷ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಆದ್ದರಿಂದ ಕರಾವಳಿ ಭಾಗದ ಮಂಗಳೂರು, ಉಡುಪಿ, ಪುತ್ತೂರು, ಕಾಸರಗೋಡು ವಿಎಚ್ಪಿ ಕಾರ್ಯಾಲಯಗಳಲ್ಲಿ ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದಿದ್ದಾರೆ. ಇದರ ಜತೆಗೆ ಆಗಸ್ಟ್ 5ರಂದು ನಡೆಯಲಿರುವ ಅಯೋಧ್ಯೆ ಭೂಮಿ ಪೂಜೆಯ ದಿನವನ್ನ ಐತಿಹಾಸಿಕವಾಗಿಸಬೇಕು ಎಂದು ತಿಳಿಸಿದರು.