ಬಂಟ್ವಾಳ: ಇಲ್ಲಿನ ವಿಧಾನಸೌಧದಲ್ಲಿ ದೋಷ ಪರಿಹಾರಕ್ಕಾಗಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ನೇತೃತ್ವದಲ್ಲಿ ಬಿ.ಸಿ. ರೋಡ್ನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಹೋಮ ನಡೆಸಲಾಯಿತು.
ಮಿನಿ ವಿಧಾನಸೌಧದಲ್ಲಿ ಕಾರ್ಯಾಚರಿಸುತ್ತಿರುವ ಕಂದಾಯ ಇಲಾಖೆಯ ಇಬ್ಬರು ಉಪ ತಹಶೀಲ್ದಾರರು ಬೆರಳೆಣಿಕೆ ದಿನಗಳ ಮಧ್ಯದಲ್ಲಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಈ ಹೋಮ ಮಾಡಲಾಗಿದೆ.
ಮಿನಿ ವಿಧಾನಸೌಧಕ್ಕೆ ವಾಸ್ತು ದೋಷ ಮತ್ತು ಈ ಪ್ರದೇಶದಲ್ಲಿ ನಾಗ ನಡೆ ಇರುವ ವಿಚಾರ ಪ್ರಶ್ನಾ ಚಿಂತನೆಯಲ್ಲಿ ತಿಳಿದು ಬಂದಿದೆಯಂತೆ. ಕಳೆದ ಸೆಪ್ಟಂಬರ್ ತಿಂಗಳಲ್ಲಿ ಉಪ ತಹಶೀಲ್ದಾರ್ಗಳಿಬ್ಬರು ನಿಧನ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರಿಂಜ ಕಳ್ಳಿಮಾರು ಜ್ಯೋತಿಷಿ ವೆಂಕಟರಮಣ ಮುಚ್ಚಿನ್ನಾಯರಲ್ಲಿ ಪ್ರಶ್ನಾ ಚಿಂತನೆ ನಡೆಸಿದ್ದು, ಅದರಲ್ಲಿ ಕಂಡುಬಂದಂತೆ ಇದೀಗ ದೋಷ ನಿವಾರಣೆ ಮತ್ತು ಫಲ ಪ್ರಾಪ್ತಿಗಾಗಿ ಮೃತ್ಯುಂಜಯ ಹೋಮಗಳನ್ನು ನಡೆಸಲಾಗಿದೆ ಎಂದು ತುಂಗಪ್ಪ ಬಂಗೇರ ಹೇಳಿದ್ದಾರೆ.
ಉಡುಪಿ ಚಂದ್ರ ಮೌಳೇಶ್ವರ ದೇವಸ್ಥಾನದ ಅರ್ಚಕರಾದ ಮನೋಹರ ತಂತ್ರಿಯವರ ನೇತೃತ್ವದಲ್ಲಿ ಮತ್ತು ಬಿ.ಸಿ. ರೋಡ್ ರಕ್ತೇಶ್ವರಿ ದೇವಿ ದೇವಸ್ಥಾನದ ಅರ್ಚಕರಾದ ರಘುಪತಿ ಭಟ್ ಪೌರೋಹಿತ್ಯದಲ್ಲಿ ಮೃತ್ಯುಂಜಯ ಹೋಮ ಮತ್ತು ವೈದಿಕ ವಿಧಿ ವಿಧಾನಗಳು ಬಿ.ಸಿ.ರೋಡ್ ರಕ್ತೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಹೋಮ ಆಯೋಜಿಸಿದ್ದ ಜಿಪಂ ಸದಸ್ಯ ತುಂಗಪ್ಪ ಬಂಗೇರ ಜತೆಗೆ ಪೂರ್ಣಾಹುತಿ ವೇಳೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಜಿಪಂ ಸದಸ್ಯರಾದ ರವಿಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ಶಂಕರ್ ಬೆದ್ರಮಾರ್, ಪ್ರಮುಖರಾದ ದೇವಪ್ಪ ಪೂಜಾರಿ, ಡೊಂಬಯ್ಯ ಅರಳ, ಸಂತೋಷ್, ಪ್ರಭಾಕರ ಪಿ.ಎಂ., ಬಂಟ್ವಾಳ ತಾಲೂಕು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.