ಮಂಗಳೂರು: ನಗರದಲ್ಲಿ ಡಿ.19ರಂದು ನಡೆದ ಹಿಂಸಾಚಾರ ಹಾಗೂ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆದ ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಹಾಜರಾದ ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು 38 ದಾಖಲೆಗಳನ್ನು ಲಿಖಿತ ಹೇಳಿಕೆ ಮುಖಾಂತರ ಸಲ್ಲಿಸಿದ್ದಾರೆ.
ನಗರದ ಹಂಪನಕಟ್ಟೆಯಲ್ಲಿರುವ ಮಿನಿವಿಧಾನ ಸೌಧದಲ್ಲಿರುವ ಉಪ ವಿಭಾಗಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ವಿಚಾರಣೆಯಲ್ಲಿ ಒಟ್ಟು 49 ಮಂದಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಲಿಖಿತ ಹೇಳಿಕೆ ಹಾಗೂ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇನ್ನೂ 57 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಾಕ್ಷಿ ವಿಚಾರಣೆ ಬಾಕಿ ಇದೆ. ಮುಂದಿನ 19 ರಂದು ಸುಮಾರು 25 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿಚಾರಣೆ ನಡೆಸಲಾಗುವುದು ಎಂದು ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಿ.ಜಗದೀಶ್ ಹೇಳಿದರು.
ನಂತರ ಮಾತನಾಡಿದ ಅವರು, ಇಬ್ಬರು ಸಾರ್ವಜನಿಕರು ಇಂದು ಹೇಳಿಕೆ ಕೊಡಬೇಕು ಹಾಗೂ ವಿಡಿಯೋ ಸಿಡಿಗಳನ್ನು ನೀಡಬೇಕು ಎಂದು ಹೇಳಿದ್ದರು. ಆದರೆ ಅದಕ್ಕೆ ಬೇಕಾದ ಲಿಖಿತ ದಾಖಲೆಗಳು ಇಲ್ಲದ ಕಾರಣ ಮುಂದಿನ ವಿಚಾರಣೆಯಲ್ಲಿ ಲಿಖಿತ ದಾಖಲೆಗಳ ಮುಖಾಂತರ ತೆಗೆದುಕೊಳ್ಳಲಾಗುವುದು. ಡಿಸಿಪಿ, ಎಸಿಪಿ (ನೋಡಲ್ ಅಧಿಕಾರಿಗಳು) ತನಿಖೆಗೆ ಹೆಚ್ಚಿನ ಸಮಯವನ್ನು ಕೇಳಿಕೊಂಡಿದ್ದಾರೆ.
ಇನ್ನೂ ಮೂರು ದಾಖಲೆಗಳು ಅವರಲ್ಲಿಲ್ಲ. ಅದು ಬಂದ ಬಳಿಕ ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ. ಡಿಸಿ, ಎಸಿ ಹಾಗೂ ವೈದ್ಯರ ವಿಚಾರಣೆ ಬಾಕಿ ಇದೆ. ಇದೆಲ್ಲಾ ಆದ ಬಳಿಕ ಪಾಟಿ ಸವಾಲಿಗೆ ಅವಕಾಶ ನೀಡಲಾಗುವುದು. ಅದಾದ ಬಳಿಕ ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುವುದು. ಇದಕ್ಕೆ ಇನ್ನೂ ಸಮಯಾವಕಾಶ ಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.