ಮಂಗಳೂರು: ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಕಾರು ಕಾಣೆಯಾಗಿದ್ದು, ಪೊಲೀಸ್ ಅಧಿಕಾರಿಗಳೇ ಅದನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿರುವ ಅಧಿಕಾರಿಗಳು ತಕ್ಷಣ ಕಾರನ್ನು ಹಾಜರುಪಡಿಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
'ಎಲ್ಲಿ ಕನ್ಸ್ಟ್ರಕ್ಷನ್ ಆ್ಯಂಡ್ ಬಿಲ್ಡರ್ಸ್ ಪ್ರೈ.ಲಿಮಿಟೆಡ್' ಎಂಬ ಹಣ ದ್ವಿಗುಣಗೊಳಿಸುವ ಕಾರ್ಪೊರೇಟ್ ಸಂಸ್ಥೆಯನ್ನು ಕೇರಳ ಮೂಲದ ಮೂವರು ದ.ಕ.ಜಿಲ್ಲೆಯ ಕಡಬ ತಾಲೂಕಿನ ಉದನೆಯಲ್ಲಿ ಸ್ಥಾಪಿಸಿದ್ದರು. ಅಲ್ಲಿ ಸಾವಿರಾರು ಮಂದಿಯಿಂದ 30 ಕೋಟಿ ರೂ. ಮಿಕ್ಕಿ ಹಣ ಸಂಗ್ರಹಿಸಿರುವ ಇವರು ಹೂಡಿಕೆದಾರರಿಗೆ ವಂಚನೆ ಮಾಡಿದ್ದರು. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ, ಅಲ್ಲಿಂದ ಪರಾರಿಯಾದ ಆರೋಪಿಗಳು ಮಂಗಳೂರಿನ ಬೆಂದೂರ್ ವೆಲ್ನಲ್ಲಿ ವ್ಯವಹಾರ ಆರಂಭಿಸಿದ್ದರು.
ಈ ಸಂದರ್ಭ ನಗರದ ಶಕ್ತಿ ನಗರದಲ್ಲಿನ ಮಹಿಳೆಯೋರ್ವರು 4.50 ಲಕ್ಷ ರೂ. ಹೂಡಿಕೆ ಮಾಡಿದ್ದರು. ಅವರಿಗೆ ವಂಚನೆಗೆ ಒಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆ ನಗರದ ಪಾಂಡೇಶ್ವರದಲ್ಲಿರುವ ನಾರ್ಕೊಟಿಕ್ ಎಕನಾಮಿಕ್ ಆ್ಯಂಡ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳ ಸಹಿತ ಬಿಎಂಡಬ್ಲ್ಯೂ, ಪೋರ್ಷ್ ಹಾಗೂ ಜಾಗ್ವಾರ್ ಎಂಬ ಮೂರು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದರು. ಬಿಎಂಡಬ್ಲ್ಯೂ ಕಾರು ಪೊಲೀಸ್ ಆಯುಕ್ತರ ಸುಪರ್ದಿಯಲ್ಲಿದ್ದರೆ, ಪೋರ್ಷ್ ಹಾಗೂ ಜಾಗ್ವಾರ್ ಕಾರು ಸಿಸಿಬಿ ಪೊಲೀಸ್ ವಶದಲ್ಲಿತ್ತು. ಇದೀಗ ಜಾಗ್ವಾರ್ ಕಾರು ಕಾಣಿಸುತ್ತಿಲ್ಲ.
ಪ್ರಕರಣವನ್ನು ಮುಚ್ಚಿ ಹಾಕಲು ಅಧಿಕಾರಿಗಳು ಹಾಗೂ ಆರೋಪಿಗಳ ನಡುವೆ ಒಳ ಒಪ್ಪಂದ ನಡೆದಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿಸಿಬಿ ಅಧಿಕಾರಿಯೋರ್ವರು ಆರೋಪಿಗಳೊಂದಿಗೆ ಡೀಲ್ ಮಾಡಿದ್ದು, ಆರೋಪಿಗಳು 'ತಮ್ಮಲ್ಲಿ ಹಣವಿಲ್ಲ, ಕಾರು ಮಾರಬಹುದು' ಎಂದು ಹೇಳಿದ್ದಾರೆ. ಇದರಿಂದ ಜಾಗ್ವಾರ್ ಕಾರನ್ನೇ ಮಾರಾಟ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.