ಸುಬ್ರಹ್ಮಣ್ಯ(ದಕ್ಷಿಣಕನ್ನಡ) : ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದಿನಾಂಕ ಅಕ್ಟೋಬರ್ 28ರ ಶನಿವಾರ ಚಂದ್ರಗ್ರಹಣ ಇರುವುದರಿಂದ ದೇವರ ದರ್ಶನದ ಸಮಯದಲ್ಲಿ ಬದಲಾವಣೆಯಾಗಲಿದೆ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಸದರಿ ದಿನದಂದು ಭಕ್ತಾದಿಗಳಿಗೆ ಶ್ರೀ ದೇವರ ದರ್ಶನದ ಸಮಯದಲ್ಲಿ ಬದಲಾವಣೆಯಾಗಲಿದ್ದು, ಶ್ರೀ ದೇವರ ದರ್ಶನ ಹಾಗೂ ಸೇವಾ ಸಮಯವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ. ಅಕ್ಟೋಬರ್ 28ರ ರಾತ್ರಿ ಮಹಾಪೂಜೆಯು ಸಾಯಂಕಾಲ ಗಂಟೆ 6.30ಕ್ಕೆ ಮುಕ್ತಾಯವಾಗಲಿದೆ. ಶನಿವಾರದಂದು ಸಾಯಂಕಾಲ ಆಶ್ಲೇಷ ಬಲಿ ಸೇವೆಯು ಇರುವುದಿಲ್ಲ. ಈ ದಿನ ಸಾಯಂಕಾಲ ಗಂಟೆ 6.30ರ ನಂತರ ಶ್ರೀ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮಾತ್ರವಲ್ಲದೆ ರಾತ್ರಿ ಪ್ರಸಾದ ಭೋಜನ ವ್ಯವಸ್ಥೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಚಂದ್ರಗ್ರಹಣದ ಸಮಯ :
ಗ್ರಹಣ ಸ್ಪರ್ಶ : ರಾತ್ರಿ ಗಂಟೆ 1.04
ಗ್ರಹಣ ಮೋಕ್ಷ : ರಾತ್ರಿ ಗಂಟೆ 2.24
ಪಂಚಾಂಗದ ಪ್ರಕಾರ ಖಂಡಗ್ರಾಸ ಚಂದ್ರಗ್ರಹಣ : ಶೋಭಕೃತ್ ಸಂವತ್ಸರ, ಅಶ್ವಿನಿ ನಕ್ಷತ್ರ, ಶುಕ್ಲ ಪಕ್ಷ, ಹುಣ್ಣಿಮೆ ತಿಥಿ, ಶನಿವಾರ ದಿನಾಂಕ 28-10-2023ರ ಅಶ್ವಿನಿ ನಕ್ಷತ್ರ, ಮೇಷ ರಾಶಿಯಲ್ಲಿ ಚಂದ್ರನಿಗೆ ರಾಹು ಗ್ರಹಣ ಉಂಟಾಗುತ್ತಿದೆ. ಈ ನಕ್ಷತ್ರ ರಾಶಿಯವರಿಗೂ ಹಾಗೂ ವೃಷಭ, ಕನ್ಯಾ, ವೃಶ್ಚಿಕ ರಾಶಿಯವರಿಗೂ ಅರಿಷ್ಟವಿದೆ. ಈ ದಿನ ಸಾಯಂಕಾಲ 4 ಗಂಟೆ ಒಳಗೆ ಆಹಾರ ಸೇವಿಸಬಹುದು. ಬಾಲವೃದ್ಧಾತುರರು ರಾತ್ರಿ 7 ಗಂಟೆ ಒಳಗೆ ಭೋಜನ ಮಾಡಬಹುದು. ಗ್ರಹಣ ಮೋಕ್ಷಾ ನಂತರ ಸ್ನಾನ ಮಾಡಿ ಮರುದಿನ ಬೆಳಿಗ್ಗೆ ಅಡುಗೆ ಮಾಡಿ ಆಹಾರ ಸೇವಿಸುವುದು. ಈ ದಿನದ ಪೂರ್ಣಿಮಾ ಶ್ರಾದ್ಧಕ್ಕೆ ಅಡ್ಡಿಯಿಲ್ಲ.
ವೈಜ್ಞಾನಿಕ ಹಿನ್ನೆಲೆ : ಚಂದ್ರ ಗ್ರಹಣ ಎಂದರೆ ಇದು ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯು ಬಂದಾಗ ಸಂಭವಿಸುವ ಪ್ರಕ್ರಿಯೆ. ಇದರ ಪರಿಣಾಮವಾಗಿ, ಭೂಮಿಯು ಸೂರ್ಯನ ಬೆಳಕನ್ನು ಚಂದ್ರನ ಮೇಲ್ಮೈಯನ್ನು ತಲುಪದಂತೆ ನಿರ್ಬಂಧಿಸುತ್ತದೆ ಮತ್ತು ಚಂದ್ರನ ಮೇಲೆ ತನ್ನ ನೆರಳು ಬೀಳಿಸುತ್ತದೆ. ಇದು ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ.
ಸಾಧಾರಣವಾಗಿ ನಾವು ವರ್ಷಕ್ಕೆ 3 ಚಂದ್ರಗ್ರಹಣಗಳನ್ನು ವೀಕ್ಷಿಸಬಹುದು. ಸೂರ್ಯ, ಚಂದ್ರ ಮತ್ತು ಭೂಮಿಯು ಹೇಗೆ ಸಾಲಿನಲ್ಲಿರುತ್ತದೆ ಎಂಬುದರ ಆಧಾರದ ಮೇಲೆ, ಚಂದ್ರಗ್ರಹಣವನ್ನು ವಿಂಗಡಿಸಲಾಗುತ್ತದೆ. ಇದರಲ್ಲಿ ಭಾಗಶಃ ಚಂದ್ರಗ್ರಹಣ ಎಂದರೆ, ಚಂದ್ರನ ಒಂದು ಭಾಗ ಮಾತ್ರ ಭೂಮಿಯ ನೆರಳಿನಲ್ಲಿ ಚಲಿಸಿದಾಗ ಉಂಟಾಗುವ ವಿಶೇಷತೆ. ನಂತರದಲ್ಲಿ ಭೂಮಿಯು ನೇರವಾಗಿ ಚಂದ್ರನ ಮುಂದೆ ಹಾದು ಹೋದಾಗ ಉಂಟಾಗುವ ಪ್ರಕ್ರಿಯೆ ಮತ್ತು ಹುಣ್ಣಿಮೆಯ ದಿನದಂದು ಚಂದ್ರನ ಮೇಲೆ ತನ್ನ ನೆರಳು ಬಿದ್ದಾಗ ಉಂಟಾಗುವ ಪ್ರಕ್ರಿಯೆ.
ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನನ್ನು ನೇರವಾಗಿ ನೋಡಬಾರದು ಎಂದು ಸಲಹೆ ನೀಡಲಾಗುತ್ತದೆ ಏಕೆಂದರೆ ಅದು ಕಣ್ಣುಗಳಿಗೆ ಹಾನಿ ಮಾಡುತ್ತದೆ. ಆದರೆ ಚಂದ್ರಗ್ರಹಣವನ್ನು ನೇರವಾಗಿ ವೀಕ್ಷಿಸಬಹುದು.
ಇದನ್ನೂ ಓದಿ : ಅಕ್ಟೋಬರ್ 29ರಂದು ಭಾಗಶಃ ಚಂದ್ರಗ್ರಹಣ; ಇಲ್ಲಿದೆ ಸಂಪೂರ್ಣ ಮಾಹಿತಿ