ಮಂಗಳೂರು : ಜಮೀನು ಖಾತೆ ಬದಲಾವಣೆ ಮಾಡಲು ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಕೌಕ್ರಾಡಿ ಗ್ರಾಮ ಪಂಚಾಯತ್ ಪಿಡಿಒ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವ್ಯಕ್ತಿಯೊಬ್ಬರಿಂದ 20 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಕೌಕ್ರಾಡಿ ಗ್ರಾ.ಪಂ ಪಿಡಿಒ ಮಹೇಶ್ ಜಿ.ಎನ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಪಿಡಿಒ.
ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿಯೊಬ್ಬರು ಕೌಕ್ರಾಡಿಯಲ್ಲಿರುವ ತಮ್ಮ ಜಮೀನಿನ ಖಾತೆ ಬದಲಾವಣೆ ಮಾಡಿ ತಮ್ಮ ಹೆಸರಿಗೆ ಮಾಡಿಸಲು 2017ರಲ್ಲಿ ಇಲ್ಲಿನ ಪಂಚಾಯತ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಖಾತೆ ಬದಲಾವಣೆ ಆಗದಿರುವುದರಿಂದ 2021ರಲ್ಲಿ ಮತ್ತೆ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿ, ಶುಲ್ಕವನ್ನು ಸಂದಾಯ ಮಾಡಿದ್ದರು. ಆದರೂ ಖಾತೆ ಬದಲಾವಣೆ ಆಗಿರಲಿಲ್ಲ.
ಈ ಸಂಬಂಧ ಕಳೆದ ಜೂನ್ 20ರಂದು ಈ ವ್ಯಕ್ತಿಯು ಕೌಕ್ರಾಡಿ ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ಈ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಜಿ.ಎನ್. ಖಾತೆ ಬದಲಾವಣೆಗೆ 20 ಸಾವಿರ ರೂ. ಲಂಚದ ಬೇಡಿಕೆಯಿಟ್ಟಿದ್ದಾರೆ. ಅದರಂತೆ ಜೂನ್ 22ರಂದು ದೂರುದಾರರಿಂದ ಆರೋಪಿ ಪಿಡಿಒ ಮಹೇಶ್ ಜಿ.ಎನ್. 20 ಸಾವಿರ ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ ನಡೆಸಿ ಬಂಧಿಸಿದ್ದಾರೆ. ಜೊತೆಗೆ ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಲೋಕಾಯುಕ್ತ ಎಸ್ ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಚೆಲುವರಾಜ್ ನೇತೃತ್ವದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಕಲಾವತಿ ಕೆ, ಚಲುವರಾಜು.ಬಿ, ಹಾಗೂ ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ. ಎ, ವಿನಾಯಕ ಬಿಲ್ಲವ ಕಾರ್ಯಾಚರಣೆ ನಡೆಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರತ್ಯೇಕ ಪ್ರಕರಣ - ಮೂಡುಬಿದಿರೆಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ : ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಇಬ್ಬರು ಗಾಯಗೊಂಡಿರುವ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ. ಗಾಯಾಳುಗಳನ್ನು ಮೂಡುಬಿದಿರೆ ನಿವಾಸಿಗಳಾದ ಅಬೂಬಕರ್ ಮತ್ತು ಅಜ್ಮಲ್ ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸಿನಾನ್, ಸಿರಾಜ್, ಹಸೈನಾರ್ ಮತ್ತು ನೌಶಾದ್ ಅವರ ತಂಡವು ತಂಡವು ಹಲ್ಲೆ ನಡೆಸಿದೆ ಎಂದು ದೂರಲಾಗಿದೆ.
ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವೆ ಮೊದಲು ವಾಹನಕ್ಕೆ ಸೈಡ್ ಕೊಡದ ವಿಚಾರ ಗಲಾಟೆ ಪ್ರಾರಂಭವಾಗಿದೆ. ಈ ಬಳಿಕ ಎರಡು ಗುಂಪುಗಳು ಇಲ್ಲಿನ ಸಮೀಪದ ಹೋಟೆಲೊಂದರಲ್ಲಿ ಸೇರಿದೆ. ಅಲ್ಲಿ ಉಪಹಾರ ಸೇವಿಸುವ ಸಂದರ್ಭ ಧರ್ಮದ ಆಚರಣೆಯ ಬಗ್ಗೆ ಇತ್ತಂಡಗಳು ಪ್ರತ್ಯೇಕವಾಗಿ ಚರ್ಚೆ ನಡೆಸಿವೆ. ಚರ್ಚೆ ವೇಳೆ ಮಾತಿಗೆ ಮಾತು ಬೆಳೆದು ಗುಂಪುಗಳ ನಡುವೆ ಗಲಾಟೆ ಆರಂಭವಾಗಿದೆ. ಈ ವೇಳೆ ಇತ್ತಂಡಗಳು ಪರಸ್ಪರ ಹಲ್ಲೆ ಮಾಡಿದ್ದಾರೆ. ಈ ವೇಳೆ ಅಬೂಬಕರ್ (57) ಮತ್ತು ಅಜ್ಮಲ್ (23) ಮೇಲೆ ಹಲ್ಲೆ ನಡೆದಿದೆ. ಈ ಸಂಬಂಧ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Chamarajanagar crime: ಬಸ್ ನಿಲ್ದಾಣದಲ್ಲಿ ಹುಡುಗಿ ಪಕ್ಕ ನಿಂತಿದ್ದ ವ್ಯಕ್ತಿ ಮೇಲೆ ಮನಬಂದಂತೆ ಹಲ್ಲೆ!