ಮಂಗಳೂರು: ಸರ್ಕಾರದ ಗೈಡ್ಲೈನ್ ಪ್ರಕಾರ ಪಾಸಿಟಿವಿಟಿ ರೇಟ್ 5% ಬಂದರೆ ಮಾತ್ರ ಅನ್ಲಾಕ್ ಅವಕಾಶ ಇರಲಿದೆ. ಆದರೆ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ 20 ರಿಂದ 21 ಇರುವ ಕಾರಣ ಅನ್ಲಾಕ್ಗೆ ಅವಕಾಶ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಮಾತನಾಡಿರುವ ಅವರು, ಜಿಲ್ಲೆಯಲ್ಲಿ ಲಾಕ್ಡೌನ್ ಮಾರ್ಗಸೂಚಿಗಳನ್ನು ಕಠಿಣಗೊಳಿಸಲಾಗುತ್ತದೆ. ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲಾಗುತ್ತದೆ. ಪಾಸಿಟಿವಿಟಿ ದರ ಕಡಿಮೆಗೊಳಿಸಲು ಜನರ ಸಹಕಾರವೂ ಅಗತ್ಯ. ಆದ್ದರಿಂದ ಯಾರೂ ಅನಗತ್ಯ ಸಂಚಾರ ಮಾಡದಿರುವಂತೆ ಮನವಿ ಮಾಡಿದರು.
ಇತ್ತೀಚೆಗೆ ನಡೆದ ವೈದ್ಯಕೀಯ ನಿರ್ಲಕ್ಷ್ಯ ಆರೋಪದ ಬಗ್ಗೆ ಹಾಗೂ ಕಾನೂನು ಕೈಗೆ ತೆಗೆದುಕೊಂಡ ಆರೋಪದ ಬಗ್ಗೆ ಡಿಎಚ್ಒ ಸಹಿತ ಎರಡು ಮೂರು ವೈದ್ಯರ ಸಮಿತಿ ರಚಿಸಿ ವರದಿ ನೀಡಲು ಹೇಳಲಾಗಿದೆ. ರೋಗಿಗಳ ಕಡೆಯಿಂದಲೂ, ವೈದ್ಯರ ಕಡೆಯಿಂದಲೂ ಹೇಳಿಕೆ ತೆಗೆದುಕೊಂಡು ಈ ಬಗ್ಗೆ ಡಿಎಚ್ಒ ನೇತೃತ್ವದ ವೈದ್ಯರ ತಂಡ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ಅದೇ ರೀತಿ ಕೊರೊನಾ ಸೋಂಕಿತರ ಬಿಲ್ ವಿಚಾರದಲ್ಲಿಯೂ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಅಲ್ಲದೆ ಈ ಬಗ್ಗೆ ದೂರು ನೀಡಿದವರ ಬಿಲ್ಗಳನ್ನು ಜಿಲ್ಲಾಡಳಿತ ಮುತುವರ್ಜಿಯಿಂದ ಪರಿಶೀಲನೆ ನಡೆಸಿ ಜನರಿಗೆ ನ್ಯಾಯ ಒದಗಿಸಲಾಗುತ್ತದೆ ಎಂದು ಹೇಳಿದರು.
ದ.ಕ.ಜಿಲ್ಲೆಯಲ್ಲಿ 11 ಗ್ರಾಪಂಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ವಿಶೇಷ ಲಾಕ್ಡೌನ್ ಮಾಡಲಾಗಿದ್ದು, ಅಲ್ಲಿ ಪಾಸಿಟಿವಿಟಿ ರೇಟ್ ನಿಯಮಿತ ಸಂಖ್ಯೆಗೆ ಬರುವವರೆಗೆ ಆ ಗ್ರಾಮಗಳಲ್ಲಿ ಮದುವೆ, ಇನ್ನಿತರ ಸಮಾರಂಭಗಳನ್ನು ಸಂಪೂರ್ಣ ರದ್ದುಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಮಾತನಾಡಿ, ಕೊರೊನಾ ಎರಡನೆಯ ಅಲೆಯ ಸಂದರ್ಭದಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕೋವಿಡ್ ಲಾಕ್ಡೌನ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಈವರೆಗೆ 2,410 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮಾಸ್ಕ್ ಧಾರಣೆ ಮಾಡದ ಕುರಿತು 13,578 ಪ್ರಕರಣ ದಾಖಲಾಗಿದ್ದು, ಸುರಕ್ಷಿತ ಅಂತರ ಕಾಯ್ದುಕೊಳ್ಳದ ಬಗ್ಗೆ 91, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ 253 ಹಾಗೂ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ 286 ಪ್ರಕರಣಗಳು ದಾಖಲಾಗಿವೆ ಎಂದರು.