ಮಂಗಳೂರು: ಜಿಲ್ಲೆಯಲ್ಲಿ 75 ಅನಾಥಾಶ್ರಮಗಳು ಕಾರ್ಯನಿರ್ವಹಿಸುತ್ತಿವೆ. ಲಾಕ್‌ಡೌನ್ ವೇಳೆ ಮಕ್ಕಳಿಗೆ ಸಂಕಷ್ಟವಾಗದಂತೆ ಕೆಲ ಇಲಾಖೆಗಳು ಹಾಗೂ ದಾನಿಗಳು ನೋಡಿಕೊಳ್ಳುತ್ತಿದ್ದಾರೆ. ವಿವಿಧ ಸ್ವಯಂಸೇವಾ ಸಂಸ್ಥೆಗಳು 74 ಅನಾಥಾಶ್ರಮಗಳನ್ನು ನಡೆಸುತ್ತಿವೆ. ಇನ್ನೊಂದು ಬಾಲಾಶ್ರಮವನ್ನು ಸರ್ಕಾರ ನಿರ್ವಹಿಸುತ್ತಿದೆ.
ಸರ್ಕಾರಿ ಅಧೀನದಲ್ಲಿ 37 ಮಕ್ಕಳಿದ್ದು, ಹೆಚ್ಚಿನವರು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಕೇವಲ 17 ಮಕ್ಕಳು ಇಲ್ಲಿ ಉಳಿದಿದ್ದಾರೆ. ಉಳಿದಂತೆ ವಿವಿಧ ಸೇವಾಸಂಸ್ಥೆಗಳು ನಡೆಸುತ್ತಿರುವ 74 ಅನಾಥಾಶ್ರಮಗಳಲ್ಲಿ 4 ಸಾವಿರಕ್ಕೂ ಅಧಿಕ ಮಂದಿಯಿದ್ದಾರೆ. ಮೂರು ಸಾವಿರಕ್ಕೂ ಅಧಿಕ ಮಂದಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಸದ್ಯಕ್ಕೆ 463 ಮಕ್ಕಳು ವಿವಿಧ ಸೇವಾಸಂಸ್ಥೆ ಆಶ್ರಮದಲ್ಲಿ ಉಳಿದುಕೊಂಡಿದ್ದಾರೆ.
ಲಾಕ್‌ಡೌನ್ ಸಮಸ್ಯೆಗಳಿಗೆ ಲೆಕ್ಕವೇ ಇಲ್ಲ.. ಜಿಲ್ಲೆಯಲ್ಲಿ ಉಳಿದುಕೊಂಡಿರುವ ವಿವಿಧ ಅನಾಥಾಶ್ರಮಗಳ ಮಕ್ಕಳ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡಿದೆ. ಅನಾಥಾಶ್ರಮಗಳಿಗೆ ದಾನಿಗಳಿಂದ ಅವತ್ಯ ವಸ್ತುಗಳ ನೆರವು ಸಿಗುತ್ತಿದೆ. ಸರ್ಕಾರದ ಅಧೀನದ ದೇವಸ್ಥಾನಗಳಿಂದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೂ ಹಲವೆಡೆ ಅವಶ್ಯ ವಸ್ತುಗಳನ್ನು ಸರ್ಕಾರದಿಂದಲೇ ಪೂರೈಸಲಾಗಿದೆ. ಅನಾಥಾಶ್ರಮಗಳಲ್ಲಿ ಇರುವ ಮಕ್ಕಳ ಆರೋಗ್ಯ ತಪಾಸಣೆಗೆ ಪರೀಕ್ಷಾ ಕಿಟ್ಗಳನ್ನು ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚನೆ ನೀಡಲಾಗಿದೆ.
ಮನೆಗೆ ಹೋದ ಮಕ್ಕಳು ತಿರುಗಾಡದಂತೆ ಎಚ್ಚರವಹಿಸಬೇಕೆಂದು ಮಕ್ಕಳ ಪಾಲಕರಿಗೆ ಸಲಹೆ ನೀಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ಅನಾಥಶ್ರಾಮಗಳಲ್ಲಿ ದಾನಿಗಳ ಮತ್ತು ಇಲಾಖೆಯ ನೆರವಿನಿಂದ ಲಾಕ್‌ಡೌನ್ ವೇಳೆಯೂ ಸಮಸ್ಯೆ ಇಲ್ಲದಂತಾಗಿದೆ.