ತಲಪಾಡಿ ಟೋಲ್ ಮತ್ತು ಸಿಟಿ ಬಸ್ ಮಾಲೀಕರ ವಿರುದ್ದ ಸ್ಥಳೀಯರ ಪ್ರತಿಭಟನೆ - ತಲಪಾಡಿ ಮಾರ್ಗದ ಬಸ್ಗಳು
ಮಿನಿ ಬಸ್ಗೆ ರೂ. 10,000, ದೊಡ್ಡ ಬಸ್ಸುಗಳಿಗೆ ರೂ. 20,000 ಬೇಡಿಕೆಯನ್ನು ನವಯುಗ ಸಂಸ್ಥೆ ಮುಂದಿಟ್ಟಿದೆ. ಆದರೆ ಅಷ್ಟೊಂದು ಹಣ ಪಾವತಿ ಕಷ್ಟವೆಂದು ತಲಪಾಡಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕರೀಂ ತಿಳಿಸಿದರು.
![ತಲಪಾಡಿ ಟೋಲ್ ಮತ್ತು ಸಿಟಿ ಬಸ್ ಮಾಲೀಕರ ವಿರುದ್ದ ಸ್ಥಳೀಯರ ಪ್ರತಿಭಟನೆ Talpadi toll and city bus owners](https://etvbharatimages.akamaized.net/etvbharat/prod-images/768-512-10852746-390-10852746-1614763942071.jpg?imwidth=3840)
ಉಳ್ಳಾಲ: ಟೋಲ್ ಆಕರಣೆಯ ಕಾರಣದಿಂದ ಬಸ್ಗಳು ತಲಪಾಡಿ ಬಸ್ ನಿಲ್ದಾಣಕ್ಕೆ ಬಾರದಿರುವುದರಿಂದ ಜನತೆ ಒಂದು ಕಿಮೀ ತನಕ ನಡೆದು ಹೋಗಿ ಬಸ್ ಹತ್ತುವ ಸಂದರ್ಭ ಎದುರಾಗಿದೆ. ಇದನ್ನು ವಿರೋಧಿಸಿ ಸ್ಥಳೀಯರು ಮತ್ತು ಪ್ರಯಾಣಿಕರು ಟೋಲ್ ಎದುರು ಮಾನವ ಸರಪಳಿ ರಚಿಸಿ, ಒಂದು ದಿನ ಟೋಲ್ ರಹಿತವಾಗಿ ಬಸ್ಗಳು ತೆರಳುವಂತೆ ಮಾಡಿದ್ದಾರೆ.
ಓದಿ: ಸಾಹುಕಾರ್ ಸಿಡಿ ಪ್ರಕರಣ: ಸಿದ್ದರಾಮಯ್ಯ ಸವಾಲ್ ಹಾಕಿದ ಕೆಲವೇ ಗಂಟೆಯಲ್ಲಿ ರಾಜೀನಾಮೆ ಪಡೆದ ಸರ್ಕಾರ!?
ಜಿಪಂ ಸದಸ್ಯೆ ಸುರೇಖಾ ಚಂದ್ರಹಾಸ್ ಮಾತನಾಡಿ, ವಿದ್ಯಾರ್ಥಿಗಳು, ವೃದ್ಧರು ಸುಡುಬಿಸಿಲಿನಲ್ಲಿ ನಡೆದುಕೊಂಡು ಸಾಗುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ಗ್ರಾಮದ ನೆಲ, ನೀರು ಎಲ್ಲಾ ಕೊಟ್ಟರೂ ಜನರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿರುವುದು ಬಹಳ ಖೇದಕರ. ಇದು ಮುಂದುವರಿದಲ್ಲಿ ಉಗ್ರ ರೀತಿಯ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದರು.
ಗಡಿನಾಡು ರಕ್ಷಣಾ ವೇದಿಕೆಯ ಸಿದ್ದೀಖ್ ತಲಪಾಡಿ ಮಾತನಾಡಿ, ಗ್ರಾಮದ ಜನರ ತಾಳ್ಮೆಯನ್ನು ಟೋಲ್ನವರು ಪರೀಕ್ಷಿಸದಿರಿ. ತಾಳ್ಮೆ ಕೆಟ್ಟಲ್ಲಿ ಗ್ರಾಮದಲ್ಲಿ ಟೋಲ್ ಉಳಿಯಲು ಅಸಾಧ್ಯ. ಈ ಕೂಡಲೇ ಬಸ್ನವರ ಜತೆಗೆ ಮಾತುಕತೆ ನಡೆಸಿ ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
31 ಬಸ್ಸುಗಳಿಗೆ ಮಾಸಿಕವಾಗಿ ರೂ. 2 ಲಕ್ಷ ಕೊಡುವುದಾಗಿ ತಲಪಾಡಿ ಬಸ್ ಮಾಲೀಕರ ಸಂಘ ಮನವಿ ಮಾಡಿತ್ತು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡು ಬಾರಿ ಸಭೆ ಸೇರಿದ್ದರು. ನವಯುಗ ಸಂಸ್ಥೆ ಪ್ರತಿಕ್ರಿಯಿಸದ ಹಿನ್ನೆಲೆ ಸಭೆ ಮೊಟಕುಗೊಂಡು, ತಲಪಾಡಿ ಜನರ ತೊಂದರೆ ಮುಂದುವರಿದಿದೆ. ಮಿನಿ ಬಸ್ಗೆ ರೂ. 10,000, ದೊಡ್ಡ ಬಸ್ಸುಗಳಿಗೆ ರೂ. 20,000 ಬೇಡಿಕೆಯನ್ನು ನವಯುಗ ಸಂಸ್ಥೆ ಮುಂದಿಟ್ಟಿದೆ. ಆದರೆ ಅಷ್ಟೊಂದು ಹಣ ಪಾವತಿ ಕಷ್ಟವೆಂದು ತಲಪಾಡಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕರೀಂ ತಿಳಿಸಿದರು.
ಕೆಲಕಾಲ ಟೋಲ್ ಸಿಬ್ಬಂದಿ ಜತೆ ವಾಗ್ವಾದ ನಡೆಸಿದ ಪ್ರತಿಭಟನಾಕಾರರು ಸಿಟಿ ಬಸ್ಗಳನ್ನು ಬಿಡುವಂತೆ ಒತ್ತಾಯಿಸಿದರು. ಸ್ಥಳಕ್ಕಾಗಮಿಸಿದ ಉಳ್ಳಾಲ ಠಾಣಾಧಿಕಾರಿ ಸಂದೀಪ್, ಪರಿಸ್ಥಿತಿಯನ್ನು ಹತೋಟಿಗೆ ತಂದರು. ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಇಂದು ದಿನವಿಡೀ ಸಿಟಿ ಬಸ್ಗಳನ್ನು ಟೋಲ್ ನಲ್ಲಿ ಉಚಿತವಾಗಿ ಕಳುಹಿಸಲಾಯಿತು.