ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟಿಂಗ್ ಸರಿಯಾಗಿ ಆಗುತ್ತಿದ್ದರೂ, ಕಾಂಗ್ರೆಸ್ ರಾಜಕೀಯ ಮಾಡಿ ಜಿಲ್ಲಾಡಳಿತಕ್ಕೆ ಕಪ್ಪುಚುಕ್ಕೆ ಇಡಲು ಪ್ರಯತ್ನ ಮಾಡುತ್ತಿದೆ. ಈ ರೀತಿಯಲ್ಲಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವುದು ಸರಿಯಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ನಗರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಶಾಸಕ ಜೆ ಆರ್ ಲೋಬೊ ಅವರು ಕೋವಿಡ್-19 ಆಸ್ಪತ್ರೆಯ ಬಗ್ಗೆ ಭಯದ ವಾತಾವರಣ ಸೃಷ್ಟಿಸಲು ಯತ್ನಿಸಿದ್ದಾರೆ. ಈಗಾಗಲೇ ಕೋವಿಡ್-19 ಸೋಂಕಿನಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಮಂದಿ ಈಗಾಗಲೇ ಗುಣಮುಖರಾಗಿ ತೆರಳಿದ್ದಾರೆ. ಆದರೂ ಈ ರೀತಿಯಲ್ಲಿ ಜನರ ದಾರಿ ತಪ್ಪಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಇದೀಗ ವಲಸೆ ಕಾರ್ಮಿಕರ ವಿಷಯದಲ್ಲಿಯೂ ಕಾಂಗ್ರೆಸ್ನ ನಾಯಕರು ಗೊಂದಲ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಎಲ್ಲರನ್ನೂ ಉಚಿತವಾಗಿ ಕರೆದುಕೊಂಡು ಹೋಗುವ ಭರವಸೆ ನೀಡಿ ವ್ಯವಸ್ಥೆ ಮಾಡಿದ್ದರೂ, ಕಾಂಗ್ರೆಸಿಗರು ಎಲ್ಲೋ ತಾವು ಕಾರ್ಮಿಕರ ಪರ ಇದ್ದೇವೇನೋ ಎಂಬಂತೆ ಬಿಂಬಿಸಲು ಹೊರಟಿದೆ ಎಂದು ಆರೋಪಿಸಿದರು.
ಈಗಾಗಲೇ ರಾಜ್ಯ ಸರ್ಕಾರ ಲಾಕ್ಡೌನ್ ಪರಿಣಾಮ ಸಂಕಷ್ಟಕ್ಕೊಳಗಾದವರಿಗೆ 1,610 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದೆ. ಇದರ ಲಾಭ ಪಡೆಯಲು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷದವರು ಕಾರ್ಮಿಕರಿಂದ ಗುರುತು ಪತ್ರ ಹಾಗೂ ಇತರ ದಾಖಲೆ ಪಡೆದುಕೊಳ್ಳಲು ಮುಂದಾಗಿದೆ ಎಂದು ದೂರುಗಳು ಬರುತ್ತಿವೆ. ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದ್ದು ಮಾತ್ರ, ಅದರ ಅನುಷ್ಠಾನವನ್ನು ಮಾಡಲು ಜಿಲ್ಲಾಡಳಿತಕ್ಕೆ ಇನ್ನಷ್ಟೇ ಮಾಹಿತಿ ನೀಡಬೇಕಾಗಿದೆ.
ಆದ್ದರಿಂದ ಯಾವುದೇ ಪಕ್ಷದವರು, ಕಾರ್ಮಿಕ ಸಂಘಟಿಕರು, ರಾಜಕಾರಣಿಗಳು ದಾಖಲೆ ಕೇಳಿದ್ದಲ್ಲಿ ಯಾರೂ ನೀಡುವುದು ಬೇಡ. ಜಿಲ್ಲಾಡಳಿತ ನೀಡುವ ಸೂಚನೆಯನ್ನು ಮಾತ್ರ ಪಾಲಿಸಿರಿ ಎಂದು ವೇದವ್ಯಾಸ ಕಾಮತ್ ವಲಸೆ ಕಾರ್ಮಿಕರಿಗೆ ಮನವಿ ಮಾಡಿದರು.