ಪುತ್ತೂರು: ಪ್ರಜಾಪ್ರಭುತ್ವದಲ್ಲಿ ಟೀಕೆ ಟಿಪ್ಪಣಿಗಳು ಸಹಜ. ಅದರಲ್ಲಿ ಗೊಂದಲ ಇಲ್ಲ. ಆದರೆ, ಕೊರೋನಾ ವಿಚಾರದಲ್ಲಿ ವೈಯಕ್ತಿಕ ಪ್ರತಿಷ್ಠೆ ಬೇಡ. ಎಲ್ಲರೂ ಒಟ್ಟಾಗಿ ಶ್ರಮಿಸೋಣ. ಎಲ್ಲೇ ತಪ್ಪಾಗಿದ್ದರೂ ಸರಿಪಡಿಸಿಕೊಳ್ಳೋಣ. ಈ ಮೂಲಕ ಕೊರೊನಾ ಮುಕ್ತ ಜಿಲ್ಲೆ ಎಂಬ ಘೋಷಣೆ ಮಾಡಲು ಪ್ರತಿಯೊಬ್ಬರೂ ಕೈಜೋಡಿಸೋಣ ಎಂದು ಮೀನುಗಾರಿಕೆ ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಶುಕ್ರವಾರ ಪುತ್ತೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಮತ್ತು ತೌಕ್ತೆ ಚಂಡಮಾರುತದ ಹಾನಿ ಸಮೀಕ್ಷೆ ನಡೆಸಲು ಕೇಂದ್ರದ ತಂಡ ಜಿಲ್ಲೆಗೆ ಭೇಟಿ ನೀಡಲಿದೆ. ದ.ಕ. ಜಿಲ್ಲಾಧಿಕಾರಿಯವರು ಈಗಾಗಲೇ ಸುಮಾರು ರೂ. 80 ಕೋಟಿ ಹಾನಿಯ ಪರಿಹಾರದ ವರದಿಯನ್ನು ಸಿದ್ಧಪಡಿಸಿದ್ದಾರೆ.
ಇದಲ್ಲದೆ, ತೌಕ್ತೆ ಚಂಡಮಾರುತದಿಂದ ಮನೆ ಹಾನಿ, ಲೋಕೋಪಯೋಗಿ ಇಲಾಖೆಯ ರಸ್ತೆ ಹಾನಿ, ಕಡಲ್ಕೊರೆತ ಮತ್ತಿತರ ಹಾನಿಗಳ ಕುರಿತು ಪರಿಹಾರಕ್ಕಾಗಿ ರೂ. 125 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಕೇಂದ್ರಕ್ಕೆ ಸಮಗ್ರ ಮಾಹಿತಿಯನ್ನು ನೀಡಿ, ಜಿಲ್ಲೆಗೆ ಮತ್ತು ರಾಜ್ಯಕ್ಕೆ ಗರಿಷ್ಠ ಪ್ರಮಾಣದಲ್ಲಿ ಪರಿಹಾರವನ್ನು ಪಡೆದುಕೊಳ್ಳುವ ಅಪೇಕ್ಷೆಯೊಂದಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರಾಜ್ಯದ ಪೂಜಾರಿ ತಿಳಿಸಿದ್ದಾರೆ.
ಲಾಕ್‌ಡೌನ್ ಬಗ್ಗೆ ಮಾತನಾಡಿ ,ಸಾಮಾನ್ಯವಾಗಿ ಲಾಕ್‌ಡೌನ್ ವಿಸ್ತರಿಸಬೇಕೆಂಬ ಇರಾದೆ ಯಾರಿಗೂ ಇಲ್ಲ. ಆದರೆ, ಕೊರೊನಾ ಸರಪಳಿಯನ್ನು ತುಂಡರಿಸಬೇಕೆಂಬ ಉದ್ದೇಶದಿಂದ ಅನಿವಾರ್ಯವಾಗಿ ಲಾಕ್‌ಡೌನ್ ವಿಸ್ತರಿಸಲಾಗಿದೆ. ಕೊರೊನಾ ಮಹಾಮಾರಿಯ ಈ ಸಂಕಷ್ಟ ಕಾಲದಲ್ಲಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗರಿಷ್ಠ ಪ್ರಮಾಣದಲ್ಲಿ ಪರಿಹಾರದ ಪ್ಯಾಕೇಜನ್ನು ಪ್ರಕಟಿಸಿದ್ದಾರೆ. ಈ ಆರ್ಥಿಕ ಸಂಕಷ್ಟದ ಕಾಲದಲ್ಲಿ ಮುಖ್ಯಮಂತ್ರಿಯವರು ಎರಡೆರಡು ಬಾರಿ ಬಡವರ್ಗದವರನ್ನು ವಿಶೇಷವಾಗಿ ಗುರುತಿಸಿ ಪ್ಯಾಕೇಜನ್ನು ಘೋಷಿಸಿರುವುದು ಅಭಿನಂದನಾರ್ಹವಾಗಿದೆ ಎಂದರು.
ಇದನ್ನು ಓದಿ: ದಿನಕ್ಕೆ 1ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಿ: ಕೇಂದ್ರಕ್ಕೆ ಕಾಂಗ್ರೆಸ್ ಮನವಿ