ಮಂಗಳೂರು : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿದೆ. 2024ರ ಜನವರಿಯಲ್ಲಿ ಉತ್ತಾರಾಯಣ ಆರಂಭದಲ್ಲಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ ಎಂದು ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಸಮಿತಿಯ ಟ್ರಸ್ಟಿಗಳಾಗಿರುವ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಮಂಗಳೂರಿನ ಉರ್ವಾ ಲೋಕಾಯುಕ್ತ ಕಚೇರಿ ಬಳಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿಗಮದ ನೂತನ ಪ್ರಧಾನ ಕಚೇರಿ 'ಮತ್ಸ್ಯ ಸಂಪದ'ಕ್ಕೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಶ್ರೀರಾಮ ಮಂದಿರದ ಕಾರ್ಯ ನಿರಂತರವಾಗಿ ಸಾಗುತ್ತಿದೆ.
ಕರ್ನಾಟಕದಿಂದ ರವಾನಿಸಿದ ಶಿಲೆಗಳಿಂದ ಅಡಿಪಾಯ ರಚನೆ ನಡೆಯುತ್ತಿದೆ. ಜೂನ್ 1ಕ್ಕೆ ಗರ್ಭಗುಡಿಯ ಶಿಲಾನ್ಯಾಸ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ನಾನು ಕೂಡ ಭಾಗವಹಿಸಲಿದ್ದೇನೆ ಎಂದು ಮಾಹಿತಿ ನೀಡಿದರು. ವಾರಣಾಸಿಯ ಜ್ಞಾನವ್ಯಾಪಿ ಮಸೀದಿಯ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ವಿಚಾರ ಸಂತಸ ತಂದಿದೆ.
ಇಲ್ಲಿತನಕ ಇದ್ದ ನಂಬುಗೆ, ಪುರಾಣದಲ್ಲಿ ಇದ್ದ ಮಾಹಿತಿ ಸತ್ಯವಾಗಿದೆ. ಇದು ಮಾತ್ರ ಅಲ್ಲದೆ, ಇಂತಹದು ಎಲ್ಲಿಯೇ ಇದ್ದರೂ ಬೆಳಕಿಗೆ ಬರಬೇಕಿದೆ. ಭಾರತೀಯ ಸನಾತನ ಸಂಸ್ಕೃತಿಗೆ ವಿಜಯ ದೊರಕಬೇಕಿದೆ. ನ್ಯಾಯಾಲಯದ ಮೂಲಕ ವಿಚಾರಣೆ ನಡೆಯುತ್ತಿರುವ ಈ ವಿಚಾರದಲ್ಲಿ ಯಾರೂ ಸಂಘರ್ಷಕ್ಕಿಳಿಯಬಾರದು ಎಂದು ಹೇಳಿದರು.
ಇದನ್ನೂ ಓದಿ: ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಪ್ರಕರಣ: ಮಸೀದಿ ತೆರವು ಮಾಡಬೇಕೆಂಬ ಅರ್ಜಿಗೆ ಕೋರ್ಟ್ ಅಸ್ತು