ಬಂಟ್ವಾಳ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆ ಪರಿಣಾಮ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ತೊಡಂಬಿಲದಲ್ಲಿ ಭೂಕುಸಿತ ಉಂಟಾಗಿದ್ದು, ಮನೆಯೊಂದು ಸಂಪೂರ್ಣ ಕುಸಿಯುವ ಹಂತಕ್ಕೆ ತಲುಪಿದೆ.
ಭೂಕುಸಿತದ ವಿಚಾರ ಮನೆಮಂದಿಗೆ ಸೋಮವಾರ ಬೆಳಗ್ಗೆ ತಿಳಿದು ಬಂದಿದ್ದು, ತಕ್ಷಣ ಮನೆ ಖಾಲಿ ಮಾಡಿದ್ದಾರೆ. ತೊಡಂಬಿಲ ನಿವಾಸಿ ಅನಿಲ್ ಮೊಂತೆರೊ ಅವರ ಮನೆಯ ಕೆಳಭಾಗದಲ್ಲಿ ಭಾನುವಾರ ತಡರಾತ್ರಿ ಕುಸಿತ ಉಂಟಾಗಿದ್ದು, ಸೋಮವಾರ ಬೆಳಗಿನ ಹೊತ್ತು ಮತ್ತಷ್ಟು ಕುಸಿದಿದೆ. ಮನೆಯ ಒಂದು ಪಾರ್ಶ್ವದಲ್ಲಿ ಸಂಪೂರ್ಣ ಕುಸಿದು, ಅಂಗಳ ಒಂದು ಬದಿಯಲ್ಲಿ ಪಾತಾಳಕ್ಕೆ ಇಳಿದಿದೆ. ಬೆಳಗ್ಗೆ ಅಂಗಳದಲ್ಲಿದ್ದ ತೆಂಗಿನಮರ ನಿಧಾನಕ್ಕೆ ಕೆಳಗೆ ಜಾರಿದೆ. ಮನೆಯ ಸರಕುಗಳು ಸೇರಿದಂತೆ ಬಾಗಿಲು, ಇತರ ಸೊತ್ತುಗಳನ್ನು ತೆಗೆದು ಸ್ಥಳಾಂತರಿಸಲಾಗಿದೆ. ಅಲ್ಲೇ ಪಕ್ಕದಲ್ಲಿದ್ದ ಅನಿಲ್ ಅವರ ತಾಯಿ ಮನೆಗೆ ತೆರಳಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿ ಮಾಹಿತಿ ಪಡೆದು ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ. ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಭೇಟಿ ನೀಡಿ ಯಾವುದೇ ಕಾರಣಕ್ಕೂ ಯಾರೂ ಕೂಡ ಮನೆಯತ್ತ ಬರಬಾರದು. ಗರಿಷ್ಠ ಪರಿಹಾರಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಅವರು ಭೇಟಿ ನೀಡಿ ಮನೆ ಮಂದಿಗೆ ಧೈರ್ಯ ತುಂಬಿದರು.
ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅವರು ಅಧಿಕಾರಿಗಳಿಗೆ ವಿಚಾರ ತಿಳಿಸಿದರು. ವಿಜಯ ಡಿಸೋಜ, ರಮೇಶ್, ಪ್ರಕಾಶ್ ಶೆಟ್ಟಿ ತುಂಬೆ ಮೊದಲಾದವರು ಭೇಟಿ ನೀಡಿದರು. ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗದ ಎಇಇ ತಾರಾನಾಥ ಸಾಲ್ಯಾನ್, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮಕರಣಿಕ ಪ್ರಶಾಂತ್, ಗ್ರಾ.ಪಂ.ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.