ಮಂಗಳೂರು : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮಂಗಳೂರು ಕಚೇರಿಯು ಭೂಸ್ವಾಧೀನದಿಂದ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ನೇರವಾಗಿ ಅವರ ಮನೆಬಾಗಿಲಿಗೇ ತೆರಳಿ ಪರಿಹಾರ ಮೊತ್ತವನ್ನು ನೀಡುವ ಕಾರ್ಯ ಮಾಡುತ್ತಿದೆ.
ಭೂಸ್ವಾಧಿನ ಪ್ರಕ್ರಿಯೆಯಲ್ಲಿ ಜಮೀನು ಗುರುತಿಸಿ, ಅಧಿಸೂಚನೆ ಹೊರಡಿಸಿ, ಆಕ್ಷೇಪಣೆಗಳನ್ನು ಪರಿಗಣಿಸಿ, ಅಂತಿಮ ಅಧಿಸೂಚನೆಯಾದ ನಂತರ ಜಮೀನು ಕಳೆದುಕೊಂಡವರಿಗೆ ಪರಿಹಾರ ಮೊತ್ತ ನೀಡಲಾಗುತ್ತದೆ. ಎಂಆರ್ಪಿಎಲ್ ನಾಲ್ಕನೇ ಹಂತದ ವಿಸ್ತರಣೆ ಯೋಜನೆಗಾಗಿ ಮಂಗಳೂರು ತಾಲೂಕಿನ ಪೆರ್ಮುದೆ, ಕುತ್ತೆತ್ತೂರು, ತೋಕೂರು ಗ್ರಾಮಗಳ 962 ಎಕರೆ ಜಮೀನನ್ನು ಕೆಐಎಡಿಬಿ ಸ್ವಾಧೀನಪಡಿಸಲಾಗಿತ್ತು. ಈ ಜಮೀನು ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದರೂ, ಜನರು ಪರಿಹಾರ ಪಡೆದುಕೊಳ್ಳುವುದು ಬಾಕಿ ಇತ್ತು.
ಇದಕ್ಕಾಗಿ ಸಂತ್ರಸ್ತರು ಬೈಕಂಪಾಡಿ ಕೆಐಎಡಿಬಿ ಕಚೇರಿಗೆ ಆಗಮಿಸಬೇಕಿತ್ತು. ಈ ಮಧ್ಯೆ ಕೊರೊನಾ ಹಿನ್ನೆಲೆ ಲಾಕ್‌ಡೌನ್ ಬಂದ ಕಾರಣ ಜನರು ಕೆಐಎಡಿಬಿ ಕಚೇರಿಗೆ ಆಗಮಿಸುವುದು ಕಷ್ಟವಾಗಿ ಕಳೆದ ಒಂದೂವರೆ ತಿಂಗಳಿನಿಂದ ಈ ಪರಿಹಾರ ವಿತರಣೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಅದರಲ್ಲೂ ಬಹುತೇಕ ಜಮೀನುಗಳ ದಾಖಲೆಗಳು ಕುಟುಂಬದ ಹಿರಿಯ ನಾಗರಿಕರ ಹೆಸರಿನಲ್ಲಿರುವುದರಿಂದ ಪರಿಹಾರ ಪಡೆದುಕೊಳ್ಳಲು ಖುದ್ದು ಅವರೇ ಬರಬೇಕಾಗಿತ್ತು.
ಕೊರೊನಾ ಭೀತಿ, ಲಾಕ್‌ಡೌನ್‍ನಿಂದ ವಾಹನ ಸಂಚಾರ ನಿರ್ಬಂಧ, ದೈಹಿಕ ಅನಾರೋಗ್ಯ ಮೊದಲಾದ ಸಮಸ್ಯೆಗಳಿಂದ ಸಂತ್ರಸ್ತರು ಬೈಕಂಪಾಡಿಯಲ್ಲಿರುವ ಕೆಐಎಡಿಬಿ ಕಚೇರಿಗೆ ಬಂದು ಪರಿಹಾರ ಪಡೆದುಕೊಳ್ಳುವುದು ಕಷ್ಟವಾಗಿತ್ತು. ಸದ್ಯ ಇದನ್ನು ಅರ್ಥೈಸಿಕೊಂಡ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಬಿನೊಯ್ ಪಿ ಕೆ ಅವರು ಮನೆಯಿಂದ ಹೊರಗೆ ಬರಲು ಕಷ್ಟವಿರುವ ಹಿರಿಯ ನಾಗರಿಕರು ಹಾಗೂ ದೈಹಿಕ ಅನಾರೋಗ್ಯವುಳ್ಳ ಅರ್ಹ ಸಂತ್ರಸ್ತರ ಪಟ್ಟಿ ತಯಾರಿಸಿದರು. ನಂತರ ಕೆಐಎಡಿಬಿ ಅಧಿಕಾರಿಗಳು ಸಿಬ್ಬಂದಿ ತಂಡವೇ ಸಂತ್ರಸ್ತರ ಮನೆಗಳಿಗೆ ತೆರಳಿ, ಅಲ್ಲಿಯೇ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ, ನಿಗದಿತ ಪರಿಹಾರದ ಮೊತ್ತವನ್ನೂ ನೀಡಿದೆ.