ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನ. 22ರಿಂದ 27ರವರೆಗೆ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಲಿದ್ದು, ವಸ್ತು ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಜಯ್ಯ ಹೆಗ್ಗಡೆಯವರು 80 ವರ್ಷಗಳ ಹಿಂದೆ ನಡೆಸಿಕೊಂಡು ಬಂದಂತೆ ಲಕ್ಷದೀಪೋತ್ಸವದ ಸಂದರ್ಭ ಲಲಿತಕಲಾ ಸಮ್ಮೇಳನ, ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ವರ್ಷ ಸರ್ವಧರ್ಮ ಸಮ್ಮೇಳನವನ್ನು ಹಿಂದಿನ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಉದ್ಘಾಟಿಸಲಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸ ಗೋಪಾಲದಾಸ್ ಗೌರ್ ಭಾಷಣ ಮಾಡಲಿದ್ದಾರೆ. ಅಲ್ಲದೆ ಇತರ ಧರ್ಮದ ವಿದ್ವಾಂಸರೂ ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಐದನೇ ದಿನ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈ ದಿವಸವೂ ಸಾಹಿತಿಗಳು ಬಂದು ಮಾತನಾಡಲಿದ್ದಾರೆ. ಅದರ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎಲ್ಲರೂ ಮುಕ್ತ ಅವಕಾಶದಿಂದ ಈ ಕಾರ್ಯಕ್ರಮ ಗಳಲ್ಲಿ ಭಾಗವಹಿಸಬಹುದು ಎಂದು ಹೆಗ್ಗಡೆಯವರು ಹೇಳಿದರು.