ಮಂಗಳೂರು: ಬಹು ಚರ್ಚೆಗೆ ಗ್ರಾಸವಾಗಿದ್ದ ಲೇಡಿಹಿಲ್ ಸರ್ಕಲ್ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವೆಂದು ಮರುನಾಮಕರಣ ಮಾಡಲಾಯಿತು. ಕಳೆದ ಏಳೆಂಟು ವರ್ಷಗಳಿಂದ ನಗರದ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವೆಂದು ಹೆಸರಿಡಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಆದರೆ ಇದಕ್ಕೆ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ಈಗ ಜಿಲ್ಲಾಡಳಿತ ಈ ವೃತ್ತಕ್ಕೆ ಮರು ನಾಮಕರಣ ಮಾಡಿತು.
ಲೇಡಿಹಿಲ್ ಸರ್ಕಲ್ಗೆ ನಾರಾಯಣ ಗುರುಗಳ ಹೆಸರಿಡಬೇಕೆಂದು ಕೆಲವೊಂದು ಸಂಘಟನೆಗಳು ಜನಪ್ರತಿನಿಧಿಗಳಿಗೆ ಒತ್ತಡ ಹಾಕುತ್ತಲೇ ಇದ್ದರು. ಆದರೆ ಇದಕ್ಕೆ ಸಾಕಷ್ಟು ವಿರೋಧವೂ ಕೇಳಿ ಬಂದಿತ್ತು. ಈ ನಡುವೆ ಅನಧಿಕೃತವಾಗಿ ನಾರಾಯಣ ಗುರುಗಳ ವೃತ್ತವೆಂದು ನಾಮಫಲಕವೂ ರಾರಾಜಿಸಿದ್ದವು. ಆದರೆ ಇದೀಗ ರಾಜ್ಯ ಸರಕಾರದ ಆದೇಶದನ್ವಯ ದಕ್ಷಿಣ ಕನ್ನಡ ಜಿಲ್ಲಾಡಳಿತ ಲೇಡಿಹಿಲ್ ಸರ್ಕಲ್ಗೆ ಅಧಿಕೃತವಾಗಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವೆಂದು ಮರುನಾಮಕರಣ ಮಾಡಿದೆ.
ಮರುನಾಮಕರಣ ಮಾಡಿರುವ ಸಚಿವ ಸುನಿಲ್ ಕುಮಾರ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶವನ್ನು ನಾವೆಲ್ಲರೂ ಪಾಲಿಸಿಕೊಂಡು ಬಂದವರು. ಮಂಗಳೂರಿಗೂ ನಾರಾಯಣ ಗುರುಗಳಿಗೆ ವಿಶೇಷ ನಂಟು ಇದೆ. ಅಸ್ಪೃಶ್ಯತೆಯ ವಿರುದ್ಧ ಹೋರಾಟ ಮಾಡುತ್ತಾ ಕುದ್ರೋಳಿಯಲ್ಲಿ ಶಿವ ದೇಗುಲವನ್ನು ಅವರು ನಿರ್ಮಾಣ ಮಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಲೇಡಿಹಿಲ್ ಸರ್ಕಲ್ಗೆ ಇಡಬೇಕೆಂಬ ಒತ್ತಾಯ ಸಾಕಷ್ಟು ಸಮಯಗಳಿಂದ ಕೇಳಿ ಬಂದಿತ್ತು ಎಂದರು.
ಓದಿ: ನಾರಾಯಣ ಗುರುಗಳನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಲ್ಲ, ಮುಂದೆಯೂ ಬಳಸುವುದಿಲ್ಲ: ಸಚಿವ ಸುನಿಲ್ ಕುಮಾರ್
ಏನೇ ವಿರೋಧಗಳು ಬಂದರೂ ಇಲ್ಲಿನ ಶಾಸಕ ವೇದವ್ಯಾಸ ಕಾಮತ್ ಅವರು ನಾರಾಯಣ ಗುರುಗಳ ಹೆಸರನ್ನು ಇಡುವ ಮೂಲಕ ಅವರ ಹೆಸರನ್ನು ಇನ್ನಷ್ಟು ಜೀವಂತಗೊಳಿಸುವ ಪ್ರಯತ್ನವನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಲ್ಲಿ ನಾರಾಯಣ ಗುರುಗಳ ಪುತ್ಥಳಿಯನ್ನು ನಿರ್ಮಾಣ ಮಾಡಿ ಸುಂದರವಾದ ಸರ್ಕಲ್ ನಿರ್ಮಾಣ ಮಾಡುವ ಕನಸು ನಮ್ಮ ಸರ್ಕಾರದ ಮುಂದಿದೆ. ಇದರ ಸಮಾಲೋಚನೆ ನಡೆಸಿ ಮುಡಾದ ಮುಖಾಂತರ ಈ ಸರ್ಕಲ್ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, ಲೇಡಿಹಿಲ್ ಸರ್ಕಲ್ಗೆ ನಾರಾಯಣ ಗುರುಗಳ ಹೆಸರು ಮರುನಾಮಕರಣ ಮಾಡಲು ಜಿಲ್ಲಾಡಳಿತ ಯತ್ನಿಸುತ್ತಿದ್ದ ಸಂದರ್ಭದಲ್ಲಿ ಹತ್ತಾರು ರೀತಿಯಲ್ಲಿ ತಡೆಯೊಡ್ಡುವ ಕಾರ್ಯವನ್ನು ಮಾಡಲಾಗಿತ್ತು. ಈ ಎಲ್ಲಾ ಅಡೆತಡೆಗಳ ಮಧ್ಯೆಯೇ ವೇದವ್ಯಾಸ ಕಾಮತ್ ಅವರು ಅದ್ಭುತವಾದ ಇಚ್ಛಾಶಕ್ತಿಯಿಂದ ಕಾನೂನು ಸಮರವನ್ನು ಮಾಡಿ ನಾರಾಯಣ ಗುರುಗಳ ವೃತ್ತವೆಂದು ಮರುನಾಮಕರಣ ಮಾಡಿದ್ದಾರೆ ಎಂದರು.
ಬಹಳಷ್ಟು ಮಂದಿ ಇದೇ ನಾರಾಯಣ ಗುರುಗಳ ಹೆಸರನ್ನು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಇಡುವಂತೆ ಸೂಚಿಸಿದ್ದರು. ಆದರೆ ಅವರಿಗೆ ಅಂತಹ ಇಚ್ಛಾಶಕ್ತಿ ಇದ್ದಲ್ಲಿ 10 ವರ್ಷಗಳ ಹಿಂದೆಯೇ ಈ ರೀತಿಯ ಮನವಿ ಬರುವಾಗಲೇ ಇಡಬಹುದಿತ್ತು. ಅಧಿಕಾರ ಇರುವಾಗ ಮಾಡಬಹುದಿತ್ತು. ಆದರೆ ಅಧಿಕಾರ ಹೋದ ಬಳಿಕ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಹೆಸರು ಹೇಳದೆ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ಗೆ ಟಾಂಗ್ ನೀಡಿದರು.