ಮಂಗಳೂರು : ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿರುವ ನಡುವೆಯೇ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಮೆಡಿಕಲ್ ಕಾಲೇಜು, ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಕೊರತೆಯಾಗಿವೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯಲ್ಲಿ ದಿನವೂ 200-300 ಮಂದಿ ಸೋಂಕಿತರು ಕಂಡು ಬರುತ್ತಿದ್ದಾರೆ, ಮೃತರ ಸಂಖ್ಯೆಯೂ ಅಧಿಕವಾಗುತ್ತಿದೆ. ಆದರೆ, ರೋಗಿಗಳಿಗೆ ಅಗತ್ಯದ ವೆಂಟಿಲೇಟರ್ಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲ ಖಾಸಗಿ ಮೆಡಿಕಲ್ ಆಸ್ಪತ್ರೆಗಳಲ್ಲಿಯೂ ಕೊರತೆ ಇದೆ ಎಂಬ ಆರೋಪ ಕೇಳಿ ಬರುತ್ತಿವೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ ಮಾತನಾಡಿ, ಜಿಲ್ಲೆಯ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಗಳ ಕೊರತೆ ಇದೆ ಅನ್ನೋದು ಸುಳ್ಳು. ಕೆಲ ಸೋಂಕಿತರಿಗೆ ವೆಂಟಿಲೇಟರ್ಗಳು ಅಗತ್ಯವಿರುವ ಹಿನ್ನೆಲೆ ಸಾಮಾನ್ಯವಾಗಿ ಎಲ್ಲಾ ಆಸ್ಪತ್ರೆಗಳಲ್ಲಿಯೂ ಬ್ಯುಸಿ ಇರುತ್ತದೆ. ಆದರೂ ಅಗತ್ಯವಿರುವ ಸೋಂಕಿತರಿಗೆ ಯಾವ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಗಳು ಖಾಲಿ ಇವೆ ಎಂದು ಮಾಹಿತಿ ನೀಡುತ್ತೇವೆ ಎಂದರು.
ಸುಮಾರು 85% ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್ ಬೆಡ್ಗಳು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಲಭ್ಯ ಇವೆ. ಸುಮಾರು 3% ಸೋಂಕಿತರಿಗೆ ಐಸಿಯು ಅಗತ್ಯವಿದೆ. ಆದರೆ, 2% ಸೋಂಕಿತರಿಗೆ ಮಾತ್ರ ವೆಂಟಿಲೇಟರ್ಗಳು ಅಗತ್ಯವಿದೆ. ಹಾಗಾಗಿ, ವೆಂಟಿಲೇಟರ್ಗಳ ಕೊರತೆ ಉದ್ಭವಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.