ಕಡಬ: ವ್ಯವಸ್ಥೆಗಳನ್ನು ಸರಿಪಡಿಸದೆ ಘೋಷಣೆ ಮಾಡಿದಂತಹ ಕಡಬ ಪಟ್ಟಣ ಪಂಚಾಯತ್ ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಆಗಿ ಘೋಷಣೆ ಆಗಿ ವರ್ಷಗಳು ಕಳೆದರೂ ಇನ್ನೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮತ್ತು ವಿವಿಧ ಇಲಾಖೆಗಳ ಕಚೇರಿಗಳನ್ನು ತೆರೆಯಲು ಸರ್ಕಾರವಾಗಲಿ ಅಥವಾ ಸಂಬಂಧಿಸಿದ ಇಲಾಖಾಧಿಕಾರಿಗಳು ಮುಂದಾಗುತ್ತಿಲ್ಲ. ಇದರಿಂದಾಗಿ ಈ ಹಿಂದೆ ಇದ್ದ ಪುತ್ತೂರಿನ ಕಚೇರಿಗಳಿಗೆ ಜನರ ಅಲೆದಾಟ ತಪ್ಪಿಲ್ಲ.
ವಿಪರ್ಯಾಸವೆಂದರೆ ಕಡಬ ತಾಲೂಕಿಗೆ ಒಳಪಡುವ ಕರ್ನಾಟಕದ ಪ್ರಸಿದ್ಧ ಸಂಪನ್ಮೂಲ ದೇಗುಲ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ನಾಮಫಲಕದಲ್ಲಿಯೇ ಈವರೆಗೆ ಸುಳ್ಯ ತಾಲೂಕು ಎಂದೇ ಬರೆದಿದೆ. ಇನ್ನೊಂದು ಕಡೆ ಬಹುತೇಕ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿರುವ ಕಡಬ ಪಟ್ಟಣ ಪಂಚಾಯತ್ ಆಗಿ ಬದಲಾವಣೆ ಆಗಿದೆ. ಒಂದು ಗ್ರಾಮೀಣ ಪ್ರದೇಶ ಪಟ್ಟಣ ಪಂಚಾಯತ್ ಆಗಿ ಬದಲಾವಣೆ ಆಗಬೇಕಾದರೆ ಅಲ್ಲಿನ ವಿದ್ಯುತ್, ನೀರಿನ ವ್ಯವಸ್ಥೆ, ರಸ್ತೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳು ಅಚ್ಚುಕಟ್ಟಾಗಿರಬೇಕು. ಆದರೆ ಕಡಬ ಎಂಬ ಗ್ರಾಮೀಣ ಪ್ರದೇಶಕ್ಕೆ ಇದೆಲ್ಲಾ ಸಮರ್ಪಕವಾಗಿ ಇಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ವಿವಿಧ ವಿಚಾರದಲ್ಲಿ ತೆರಿಗೆಗಳನ್ನು ಹೆಚ್ಚುವರಿ ಮಾಡಲಾಗುತ್ತಿದೆ. ಇಲ್ಲಿನ ಸ್ಥಳೀಯ ಬ್ಯಾಂಕ್ಗಳಲ್ಲಿ ಈ ಹಿಂದೆ ರೂ. 250ರಿಂದ 500 ಹಣವಿದ್ದರೆ ಹೊಸ ಖಾತೆ ಆರಂಭಿಸಬಹುದಿತ್ತು. ಆದರೆ ಅದು ಈಗ ಇದು 500ರಿಂದ 1,000ಕ್ಕೆ ಬದಲಾಗುತ್ತಿದೆ. ಇದರಿಂದಾಗಿ ವಿವಿಧ ವಿದ್ಯಾರ್ಥಿ ವೇತನ, ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯುವ ಗ್ರಾಮೀಣ ಕೃಷಿಕರಿಗೆ ಸಂಕಷ್ಟ ಎದುರಾಗಿದೆ. ಮಾತ್ರವಲ್ಲದೆ ಮನೆ ತೆರಿಗೆ, ನೀರಿನ ಬಿಲ್, ವಿದ್ಯುತ್ ಬಿಲ್, ವಿವಿಧ ತೆರಿಗೆಗಳು, ಕಟ್ಟಡ ತೆರಿಗೆಗಳನ್ನು ಪಟ್ಟಣ ಪಂಚಾಯತ್ ನಿಯಮಾನುಸಾರ ಹೆಚ್ಚಿಸಲಾಗುತ್ತಿದೆ.
ಇನ್ನು ಬಿಲ್ ಪಾವತಿ ಮಾಡಲು ಪಂಚಾಯತ್ನಲ್ಲಿ ವ್ಯವಸ್ಥೆ ಮಾಡಲಾಗಿಲ್ಲ. ಬ್ಯಾಂಕ್ನಲ್ಲಿ ಕಟ್ಟಬೇಕು. ಇದರಿಂದ ಗ್ರಾಮೀಣ ಜನರಿಗೆ ತೊಂದರೆ ಆಗುತ್ತಿದೆ ಎಂಬ ಆರೋಪವೂ ಇದೆ.