ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಡೆಯುವ ಐತಿಹಾಸಿಕ ಪ್ರಸಿದ್ದ ಕುಲ್ಕುಂದ ಬಸವನಮೂಲೆಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗೋಪೂಜೆ ನಡೆಯಿತು.
ಪುರಾತನ ಕಾಲದಿಂದಲೂ ಕುಕ್ಕೆ ಸುಬ್ರಹ್ಮಣ್ಯ ಜಾತ್ರೆಯ ಮೊದಲು ನಡೆಯುತ್ತಿದ್ದ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಜಾನುವಾರು ಜಾತ್ರೆ ಬಹಳ ಜನಪ್ರಿಯತೆ ಪಡೆದಿತ್ತು. ಆದರೆ, ಈ ಜಾನುವಾರು ಜಾತ್ರೆ ಇದೀಗ ಹೆಸರಿಗೆ ಮಾತ್ರ ಸಾಂಕೇತಿಕವಾಗಿ ನಡೆಸುವಂತಹ ಹಂತಕ್ಕೆ ಬಂದಿದೆ. ಸಾಂಪ್ರದಾಯಿಕ ಹಿನ್ನೆಲೆ ಮತ್ತು ಹಿರಿಯರು ಹೇಳುವ ಪ್ರಕಾರ ಕಾರ್ತಿಕ ಹುಣ್ಣಿಮೆಯ ದಿನ ಕುಲ್ಕುಂದ ಜಾನುವಾರು ಜಾತ್ರೆ ಆರಂಭಗೊಳ್ಳುತ್ತದೆ.
ಕಾರ್ತಿಕ ಹುಣ್ಣಿಮೆಯ ದಿನವಾದ ಶ್ರೀಬಸವೇಶ್ವರ ದೇವಸ್ಥಾನಕ್ಕೆ ಕುಲ್ಕುಂದ ಪರಿಸರದ ಸುಮಾರು 10ಕ್ಕೂ ಅಧಿಕ ಗೋವುಗಳನ್ನು ಅಲಂಕಾರ ಮಾಡಿ ಕರೆತರಲಾಗಿತ್ತು. ನಂತರ ಬಸವೇಶ್ವರ ದೇವಳದ ಅರ್ಚಕರು ಗೋವುಗಳಿಗೆ ಗೋಪೂಜೆ ನೆರವೇರಿಸಿ, ಗೋಗ್ರಾಸ ನೀಡಿದರು. ಬಳಿಕ ಬಸವೇಶ್ವರ ದೇವಸ್ಥಾನದ ಗದ್ದೆಯಲ್ಲಿ ಜಾನುವಾರುಗಳನ್ನು ಕಟ್ಟುವ ಮೂಲಕ ಸಂಪ್ರದಾಯದಂತೆ ಇತಿಹಾಸ ಪ್ರಸಿದ್ಧ ಕುಲ್ಕುಂದ ಜಾನುವಾರು ಜಾತ್ರೆಯನ್ನು ಆಚರಿಸಲಾಯಿತು.