ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣ, ವಿಗ್ರಹಗಳು ನಾಪತ್ತೆಯಾಗಿವೆ ಎಂಬ ಶ್ರೀನಾಥ್ ಟಿ.ಎಸ್. ಆಪಾದನೆ ದುರುದ್ದೇಶದಿಂದ ಕೂಡಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಶ್ರೀನಾಥ್ ಟಿ.ಎಸ್. ಈ ಹಿಂದೆ ದೇಗುಲದಲ್ಲಿ ಸರ್ಪಸಂಸ್ಕಾರ ಪೂಜೆಯ ಸೇವಾಕರ್ತೃ ಆಗಿದ್ದರು. ಈ ವೇಳೆ ಪೂಜೆ ಬಳಿಕ ಭಕ್ತರ ಬಳಿ ದಕ್ಷಿಣೆಗಾಗಿ ಪೀಡಿಸಿರುವ ಬಗ್ಗೆ ದೇಗುಲಕ್ಕೆ ಲಿಖಿತವಾಗಿ ದೂರು ಬಂದಿತ್ತು. ದೂರಿನ ಹಿನ್ನೆಲೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿ ದತ್ತಿ ಇಲಾಖೆಯ ಸಹಾಯ ಆಯುಕ್ತರು ಘಟನೆಯ ಬಗ್ಗೆ ತನಿಖೆ ನಡೆಸಿದ್ದರು. ಪ್ರಕರಣದಲ್ಲಿ ಭಕ್ತರು ಮಾಡಿದ ಆರೋಪ ಸಾಬೀತಾಗಿದ್ದು, 600 ರೂಪಾಯಿ ಪಡೆದಿರುವುದು ಗೊತ್ತಾಗಿತ್ತು. ಈ ಕಾರಣದಿಂದಾಗಿ ಶ್ರೀನಾಥ್ರನ್ನು ಸರ್ಪಸಂಸ್ಕಾರ ಸೇವಾ ಕರ್ತೃ ಸ್ಥಾನದಿಂದ ಸೆ.29ರಂದು ತೆಗೆದು ಹಾಕಲಾಗಿದೆ.
ಈ ಹಿನ್ನೆಲೆ ಶ್ರೀನಾಥ್, ದೇಗುಲದ ಆಡಳಿತಾಧಿಕಾರಿ ಹಾಗೂ ಇ.ಒ ವಿರುದ್ಧ ಸುಳ್ಳು ಆಪಾದನೆ ಹೊರಿಸಿದ್ದಾರೆ. ವೈಯಕ್ತಿಕ ಕಾರಣವನ್ನು ಮುಂದುವರೆಸಿಕೊಂಡು ದೇಗುಲದ ಆಭರಣ ವಿಗ್ರಹ ನಾಪತ್ತೆಯಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ದೇಗುಲದ ಆಸ್ತಿ, ಸೇವೆಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಮಾಹಿತಿಯನ್ನು ರವಾನಿಸಲಾಗಿದೆ. ಆದಾಗ್ಯೂ ದೇಗುಲದಲ್ಲಿ ಅವ್ಯವಹಾರ ಆಗಿದೆ ಎಂದು ಆಪಾದನೆ ಹೊರಿಸಿದ್ದಾರೆ ಎಂದು ಹೇಳಿದೆ.