ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೆಹರು ನಗರದಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಮಹಿಳೆಯರಿಬ್ಬರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಮಂಗಳೂರು ಜಪ್ಪುಗುಡ್ಡೆ ನಿವಾಸಿಗಳಾದ ರುಕ್ಮಿಣಿ (62) ಮತ್ತು ಸರೋಜಿನಿ (62) ಎಂಬುವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮಂಗಳೂರಿನ ಶಕ್ತಿನಗರ ನಿವಾಸಿ ಅನುಷಾ (40), ಕಾರು ಚಾಲಕ ಉಮೇಶ್ (45) ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿನಲ್ಲಿದ್ದವರು ನರಿಕೊಂಬು ಪರಿಸರದಲ್ಲಿ ನಡೆಯುತ್ತಿದ್ದ ಗೃಹಪ್ರವೇಶಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿದೆ ಎಂದು ತಿಳಿದು ಬಂದಿದೆ. ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.