ಮಂಗಳೂರು: ಕೊರೊನಾ ಸೋಂಕಿತರ ಅಂತ್ಯಸಂಸ್ಕಾರ ನಡೆಸಲು ಯಾರೂ ಮುಂದೆ ಬಾರದ ಈ ಕಾಲದಲ್ಲಿ ಮಂಗಳೂರಿನ ಟೀಂ ಬಿ ಹ್ಯೂಮನ್ ಹಾಗೂ ಟೀಂ ಐವೈಸಿ ಯೂತ್ ತಂಡವು ಇವತ್ತು ಸೋಂಕಿನಿಂದ ಮೃತಪಟ್ಟ ನಾಲ್ವರಿಗೆ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದೆ.
ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ನಾಲ್ವರು ಸೋಂಕಿತರು ಮೃತಪಟ್ಟಿದ್ದು, ಅಲ್ಲಿಗೆ ಧಾವಿಸಿರುವ ಟೀಂ ಬಿ ಹ್ಯೂಮನ್ ನ ಆಸಿಫ್ ಡೀಲ್ಸ್ ಮತ್ತು ಐವೈಸಿ ಯೂತ್ ನ ಸುಹೈಲ್ ಕಂದಕ್ ಹಾಗೂ ತಂಡ ನಾಲ್ವರ ಮೃತದೇಹವನ್ನು ಬೊಲೂರು, ಕದ್ರಿ, ನಂದಿಗುಡ್ಡೆಯ ಸ್ಮಶಾನದಲ್ಲಿ ಗೌರವಪೂರ್ಣವಾಗಿ ಅಂತ್ಯಕ್ರಿಯೆ ನಡೆಸಿದೆ. ಈ ತಂಡವು ನಗರದ ಆಸ್ಪತ್ರೆಗಳು ಮತ್ತು ರೋಗಿಗಳೊಂದಿಗೆ ನಿರಂತರ ಸಂಪರ್ಕವನ್ನಿರಿಸಿ, ಅವರಿಗೆ ಅಗತ್ಯ ನೆರವು ನೀಡುತ್ತಿದೆ. ಮೃತರ ಅಂತ್ಯಕ್ರಿಯೆಯನ್ನು ಜಾತಿ, ಮತ, ಧರ್ಮ ಭೇದವಿಲ್ಲದೇ ನಡೆಸುತ್ತಿದೆ.
ಇಂದು ಬೆಂಗಳೂರು, ಬೆಳ್ತಂಗಡಿ, ಮಂಗಳಾದೇವಿ, ಕಂದಾವರದ ನಾಲ್ವರು ಸೋಂಕಿನಿಂದ ಮೃತಪಟ್ಟವರ ಅಂತಿಮ ಸಂಸ್ಕಾರ ನಡೆಸಲಾಗಿದೆ. ಟೀಂ ಹ್ಯೂಮನ್ ತಂಡದಿಂದ ಆಸಿಫ್ ಡೀಲ್ಸ್, ಅಶ್ರಫ್ ಕಂದಕ್, ಇಮ್ರಾನ್, ಅಹ್ನಾಫ್ ಡೀಲ್ಸ್, ವಾಹಿದ್ ಹಾಗೂ ಐವೈಸಿ ಯೂತ್ ತಂಡದಲ್ಲಿ ಸುಹೈಲ್ ಕಂದಕ್, ಲುಕ್ಮಾನ್, ಹಸನ್ ಡೀಲ್ಸ್, ದೀಕ್ಷಿತ್, ಅಪ್ಪಿ, ಬಾಚಿ ಅಂತ್ಯಸಂಸ್ಕಾರ ಕಾರ್ಯ ನಡೆಸಿದ್ದಾರೆ.