ಮಂಗಳೂರು : ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಈ ಬಗ್ಗೆ ಮಾತನಾಡಿದ ಅವರು, ಲಾಕ್ಡೌನ್ನಿಂದ ವಿವಿಧ ಅಂಗಡಿ ಮಾಲೀಕರುಗಳು ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದಾರೆ. ಈ ಹಿನ್ನೆಲೆ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿದ್ದೇನೆ. ಜನ ಜೀವನಕ್ಕೆ ತೊಂದರೆಯಾಗಬಾರದೆಂದು ಕ್ರಮಕೈಗೊಂಡಿದ್ದು, ನಾಳೆ ಬೆಳಿಗ್ಗೆಯಿಂದ ಅಪರಾಹ್ನ 2 ಗಂಟೆಯವರೆಗೆ ಎಲ್ಲ ಅಂಗಡಿ-ಮುಂಗಟ್ಟು ತೆರೆಯಬಹುದೆಂದು ತಿಳಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ ಎಂದರು.
ಕೋವಿಡ್ ಸಂಬಂಧ ಬಹಳ ಕಠಿಣ ಪರಿಸ್ಥಿತಿಯಲ್ಲಿ ಜಿಲ್ಲೆಯಿದೆ. ಹಾಗಾಗಿ, ಅನಗತ್ಯವಾಗಿ ತಿರುಗಾಡದೇ, ಲಸಿಕೆ ತೆಗೆದುಕೊಳ್ಳಬೇಕು. ಕೊರೊನಾ ನಿಯಮಗಳನ್ನು ಉಲ್ಲಂಘಿಸಬಾರದು. ವಿನಾಕಾರಣ ಗುಂಪು ಸೇರಬಾರದು. ಸಾಮಾಜಿಕ ಅಂತರ ಕಾಪಾಡಬೇಕು ಎಂದು ಜಿಲ್ಲೆಯ ಜನತೆಯನ್ನು ವಿನಂತಿಸಿದ್ದಾರೆ.
ಜನರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಸಿಎಂ ನಿರ್ದೇಶನದಂತೆ ಮಧ್ಯಾಹ್ನದವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲ ಅಂಗಡಿಗಳು ತೆರೆದಿರುತ್ತವೆ ಎಂದು ತಿಳಿಸಿದರು.