ಮಂಗಳೂರು: ಕೊರೊನಾದಿಂದ ಮುಜರಾಯಿ ದೇವಸ್ಥಾನಗಳಿಂದ ಅಂದಾಜು 600 ಕೋಟಿ ನಷ್ಟವಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇರುವ ಎ, ಬಿ ದರ್ಜೆ ದೇವಸ್ಥಾನಗಳಿಂದ ಬರುತ್ತಿದ್ದ ಆದಾಯ ಕಳೆದೆರಡು ತಿಂಗಳಿನಿಂದ ನಿಂತು ಹೋಗಿದೆ. ಕೊಲ್ಲೂರು ದೇವಾಲಯವೊಂದರಲ್ಲೆ ಏಪ್ರಿಲ್, ಮೇ ತಿಂಗಳಲ್ಲಿ 14 ಕೋಟಿ ಆದಾಯ ಬರುತ್ತಿತ್ತು. ವಾರ್ಷಿಕವಾಗಿ ಶೇಕಡಾ 35ರಷ್ಟು ಆದಾಯ ಕಡಿಮೆಯಾಗಿದೆ ಎಂದರು.
ಮುಜರಾಯಿ ಇಲಾಖೆಯ ಸಪ್ತಪದಿ ಕಾರ್ಯಕ್ರಮ ಏ. 26 ಮತ್ತು ಮೇ 24ಕ್ಕೆ ನಡೆಯಬೇಕಿತ್ತು. ಕೊರೊನಾದಿಂದ ಈ ಕಾರ್ಯಕ್ರಮವೂ ನಿಂತು ಹೋಗಿದೆ. ಇದರ ಮೂಲಕ ರಾಜ್ಯದಲ್ಲಿ 1500 ಜೋಡಿಗಳ ವಿವಾಹ ನಡೆಯಬೇಕಿತ್ತು. ಮುಖ್ಯಮಂತ್ರಿಗಳು 50ಕ್ಕಿಂತ ಹೆಚ್ಚು ಜನರಿಲ್ಲದೆ ಮದುವೆ ನಡೆಸಬಹುದು ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸಪ್ತಪದಿ ಮದುವೆ ಕಾರ್ಯಕ್ರಮ ಹೇಗೆ ನಡೆಸಬಹುದು ಎಂದು ಚಿಂತಿಸುತ್ತಿದ್ದೇವೆ. ಸಪ್ತಪದಿ ವಿವಾಹ ಕಾರ್ಯಕ್ರಮ ನಿಶ್ಚಿತವಾಗಿ ನಡೆಯಲಿದೆ ಎಂದು ತಿಳಿಸಿದರು.