ಮಂಗಳೂರು : ಕರಾವಳಿಯ ಪ್ರಭಾವಿ ದೈವ ಕೊರಗಜ್ಜನ ಕೋಲದಲ್ಲಿ ಅನಾರೋಗ್ಯ ಪೀಡಿತ ಮುಸ್ಲಿಂ ಬಾಲಕನಿಗೆ ಅಭಯ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವೈರಲ್ ಆಗಿರುವ ಈ ವಿಡಿಯೋ ಎಲ್ಲಿ ನಡೆದಿದ್ದು ಮತ್ತು ಯಾವಾಗ ನಡೆದಿದ್ದು ಎಂಬ ಮಾಹಿತಿ ಇಲ್ಲ.
ಕೊರಗಜ್ಜನ ಕೋಲ ನಡೆಯುತ್ತಿರುವ ವೇಳೆ ಮುಸ್ಲಿಂ ಧರ್ಮದ ಕುಟುಂಬವೊಂದು ಆಗಮಿಸಿ ಅನಾರೋಗ್ಯದಲ್ಲಿದ್ದ ತಮ್ಮ ಪುಟ್ಟ ಮಗು ರಕ್ಷಿಸುವಂತೆ ಪ್ರಾರ್ಥಿಸಿದ್ದಾರೆ. ಆ ಮಗುವನ್ನು ಕೊರಗಜ್ಜ ದೈವ ತನ್ನ ಮಡಿಲಿಗೆ ಹಾಕಿ ಕಾಯಿಲೆ ಗುಣಪಡಿಸುವ ಭರವಸೆ ನೀಡಿದೆ. ಮಗುವಿಗೆ ತನ್ನ ಹೆಸರಿನ ಒಂದಕ್ಷರವನ್ನು ಹೆಸರಿನಲ್ಲಿ ಇಡುವಂತೆ ಹೇಳಿದೆ.
ಮಗುವಿನ ಕಾಯಿಲೆ ಎಲ್ಲೂ ಗುಣವಾಗದೆ ಇದ್ದಾಗ ಕೊರಗಜ್ಜನಿಗೆ ಹರಕೆ ಹೇಳಲು ಆ ಕುಟುಂಬ ಆಗಮಿಸಿತ್ತು. ಮಗುವನ್ನು ತನ್ನ ಮಡಿಲಿನಲ್ಲಿ ಹೊತ್ತು ನರ್ತನ ಮಾಡಿದ ಕೊರಗಜ್ಜ ದೈವ ಮಗುವನ್ನು ಆರೋಗ್ಯವಂತನನ್ನಾಗಿ ಮಾಡಿ ಇಡೀ, ಕುಟುಂಬ ಬೆಳಗಿಸುತ್ತೇನೆ ಎಂದು ಅಭಯ ನೀಡಿದೆ.
ಓದಿ:ವಿವಿ ಕುಲಪತಿಗಳ ಆಯ್ಕೆಗೆ ಬೇಕಿದೆ ಪಾರದರ್ಶಕತೆ; ಮೆರಿಟ್ಗೆ ಸಿಗಲಿ ಆದ್ಯತೆ
ಇದೇ ಸಂದರ್ಭ ಕೊರಗಜ್ಜ ದೈವ ಉಳ್ಳಾಲದ ಮಸೀದಿಯ ಸೌಹಾರ್ದ ಪರಂಪರೆಯನ್ನು ಹೇಳಿ ‘ಈ ಮಣ್ಣಿನಲ್ಲಿ ಬೇಧವಿಲ್ಲ, ಧರ್ಮವಿಲ್ಲ. ಎಲ್ಲರೂ ಒಂದೇ, ಎಲ್ಲರೂ ನನ್ನವರೇ.. ಈ ಮಗುವನ್ನು ನಗಿಸುತ್ತ ನಡೆಯಿಸುತ್ತೇನೆ. ‘ನನ್ನ ಅಜ್ಜ’ ಎಂದು ಮಗುವಿನ ನಾಲಗೆಯಲ್ಲಿ ಹೇಳಿಸುತ್ತೇನೆ’ ಎಂದು ಅಭಯ ನೀಡಿ ಆಶೀರ್ವದಿಸಿದೆ.