ಮಂಗಳೂರು: ಕ್ರೀಡೆಯಿಂದ ಆಗುವ ಗಾಯಗಳಿಗೆ ಉತ್ಕೃಷ್ಟ ಮಟ್ಟದ ಚಿಕಿತ್ಸೆ ನೀಡಲು ಮಂಗಳೂರಿನ ಕೆಎಂಸಿ ಆಸ್ಪತ್ರೆ ಸ್ಪೋರ್ಟ್ಸ್ ಒಪಿಡಿ ಆರಂಭಿಸಿದ್ದು, ಬೆಂಗಳೂರು ಹೊರತುಪಡಿಸಿದ್ರೆ ರಾಜ್ಯದಲ್ಲೇ ಇದು ಮೊದಲ ಚಿಕಿತ್ಸಾ ಕೇಂದ್ರವಾಗಿದೆ.
ಯಾವುದೇ ಕ್ರೀಡೆಗಳಿಗೆ ಸಂಬಂಧಿಸಿದಂತೆ ಆಗುವ ಗಾಯಗಳಿಗೆ ಸಂಪೂರ್ಣ ಹಾಗೂ ಸಮಗ್ರ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ಕೆಎಂಸಿ ಆಸ್ಪತ್ರೆ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಆರಂಭಿಸಿದ್ದು, ಈ ವಿಭಾಗದ ಹೊಣೆಯನ್ನು ಕೆಎಂಸಿ ಆಸ್ಪತ್ರೆಯ ಕ್ರೀಡಾ ಗಾಯಗಳು, ಆರ್ಥೋಪೆಡಿಕ್ಸ್ , ಸೊಂಟ ಮತ್ತು ಮಂಡಿ ವಿಶೇಷ ತಜ್ಞ ಆಗಿರುವ ಡಾ. ಯೋಗೀಶ್ ಕಾಮತ್ ಅವರು ವಹಿಸಿಕೊಂಡಿದ್ದಾರೆ. ಇದೇ ವಿಭಾಗದಲ್ಲಿ ಇದೀಗ ಸ್ಪೋರ್ಟ್ಸ್ ಒಪಿಡಿಯನ್ನು ಸಹ ಆರಂಭಿಸಿ ಕ್ರೀಡಾಗಾಯಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಈಗಾಗಲೇ ರಾಷ್ಟ್ರೀಯ ಮಟ್ಟದ ಅಥ್ಲೀಟ್ಗಳಾಗಿರುವ ಚೆಲ್ಸಾ ಮೇದಪ್ಪ, ನಿತೇಶ್ ಕುಮಾರ್, ಅನ್ವಿತಾ ಆಳ್ವಾ, ಅಂಕುಶ್ ಭಂಡಾರಿ, ರಾಹುಲ್ ಬಿ ಎಂ, ಕಾರ್ತಿಕ್ ಯು, ರೋಹನ್ ಡಿ ಕುಮಾರ್, ಶರವಣ, ಯಜನೀಶ್ ರಾವ್, ಅರುಣ್ ಕುಮಾರ್, ಮೈಥಿಲಿ ಪೈ ಸೇರಿದಂತೆ ಹಲವು ಕ್ರೀಡಾಪಟುಗಳು ಗಾಯಗಳಿಗೆ ಚಿಕಿತ್ಸೆ ಪಡೆದುಕೊಂಡು, ಆಸ್ಪತ್ರೆ ಚಿಕಿತ್ಸೆಯನ್ನು ಶ್ಲಾಘಿಸಿದ್ದಾರೆ.