ಪುತ್ತೂರು(ಮಂಗಳೂರು) : ಕೊರೊನಾ ಹಿನ್ನೆಲೆ ರದ್ದುಗೊಂಡಿದ್ದ ಪುತ್ತೂರು ಸಂತೆ ಇದೀಗ ಮತ್ತೆ ಆರಂಭವಾಗಿದೆ. ಕೊರೊನಾ 2ನೇ ಅಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ವಾರದ ಸಂತೆ ಆರಂಭಿಸುವ ಮೂಲಕ ಇದೀಗ ಜನತೆಯ ಆತಂಕಕ್ಕೆ ಕಾರಣವಾಗಿದೆ.
ಆದರೆ, ಇದೊಂದು ಪೂರ್ವ ತಯಾರಿ ಸಂತೆ. ಅಧಿಕೃತ ಸಂತೆಗೆ ನಗರಸಭೆಯಿಂದ ಅವಕಾಶ ನೀಡಲಾಗಿಲ್ಲ ಎಂದು ನಗರಸಭಾ ಅಧ್ಯಕ್ಷರು ತಿಳಿಸಿದ್ದಾರೆ. ಕಳೆದ ಒಂದು ವರ್ಷಗಳ ನಂತರ ಮೊದಲ ಬಾರಿಗೆ ಸೋಮವಾರ ಕಿಲ್ಲೆ ಮೈದಾನದಲ್ಲಿ ಪುತ್ತೂರಿನ ವಾರದ ಸಂತೆ ನಡೆದಿದೆ. ಇದಕ್ಕೆ ನಗರಸಭೆಯಿಂದ ಯಾವುದೇ ಕಾರ್ಯದೇಶ ನೀಡಲಾಗಿಲ್ಲ. ಸರ್ಕಾರಿ ಸವಾಲಿಗಿಂತ ಅಧಿಕ ದರದಲ್ಲಿ ಏಲಂ ಪಡೆದಿರುವವರು ಪ್ರಾಯೋಗಿಕ ನೆಲೆಯಲ್ಲಿ ಈ ಸಂತೆ ನಡೆಸಿದ್ದಾರೆ.
ಕಿಲ್ಲೆ ಮೈದಾನದ ಸಂತೆಗೆ ಸಂಬಂಧಿಸಿ ಮರು ಏಲಂ ಪ್ರಕ್ರಿಯೆ ನಡೆಸಲಾಗಿತ್ತು. ಈ ಏಲಂ ಪ್ರಕ್ರಿಯೆಯಲ್ಲಿ ಸರ್ಕಾರಿ ಸವಾಲು 6.26 ಲಕ್ಷ ರೂ. ಇದ್ದು, ಬಪ್ಪಳಿಗೆ ಅಬೂಬಕ್ಕರ್ ಸಿದ್ದೀಕ್ ಎಂಬುವರು 6.43 ಲಕ್ಷಕ್ಕೆ ಸಂತೆ ಏಲಂನ ಪಡೆದಿದ್ದಾರೆ. ಕೊರೊನಾ ಹಿನ್ನೆಲೆ ಸಂತೆ ವಹಿವಾಟು ನಿಂತು ಹೋಗಿತ್ತು. ಇದೀಗ ಏಪ್ರಿಲ್ ತಿಂಗಳಿನಿಂದ ಹೊಸ ಬಿಡ್ಡುದಾರರು ಸಂತೆ ನಡೆಸುವ ಜವಾಬ್ದಾರಿ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಅವರು ಪೂರ್ವ ತಯಾರಿ ಸಂತೆ ಆಯೋಜಿಸಿರುವುದಾಗಿ ತಿಳಿದು ಬಂದಿದೆ.
ಮಾಸ್ಕ್-ಅಂತರ ಕೇವಲ ನಾಮಕಾವಸ್ಥೆ : ಪುತ್ತೂರು ಆಸುಪಾಸಿನ ರೈತರಲ್ಲದೆ ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಭಾಗದ ರೈತರು ಪುತ್ತೂರು ಸಂತೆಗೆ ಬರುತ್ತಿದ್ದರು. ಬೇರೆ ಜಿಲ್ಲೆಗಳ ವರ್ತಕರು ಇದರಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ, ಕಳೆದ ಒಂದು ವರ್ಷದಿಂದ ಕೊರೊನಾ ಹಿನ್ನೆಲೆ ಸಂತೆಯೇ ಇಲ್ಲವಾಗಿತ್ತು. ಇದರ ಮೊದಲು ಸಂತೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸುವ ಪ್ರಯತ್ನ ನಡೆದು ಪ್ರತಿಭಟನೆ, ಆರೋಪ-ಪ್ರತ್ಯಾರೋಪಗಳ ನಂತರ ತಣ್ಣಗಾಗಿತ್ತು.
ಇಂತಹ ವ್ಯವಸ್ಥೆ ನಡುವೆ ಇದೀಗ ಮತ್ತೆ ಸಂತೆ ಆರಂಭವಾಗಿದೆ. ನಗರಸಭಾ ಆಡಳಿತದ ಪ್ರಕಾರ ಅಧಿಕೃತ ಅಲ್ಲದಿದ್ದರೂ ಸಂತೆಯಂತೂ ನಡೆದಿದೆ. ಆದರೆ, ಇಲ್ಲಿ ಕೊರೊನಾ ಮುನ್ನೆಚ್ಚರಿಕೆಗೆ ಯಾವುದೂ ಫಲ ನೀಡಿದಂತೆ ಕಂಡು ಬರಲಿಲ್ಲ. ಮಾಸ್ಕ್-ಅಂತರ ಲೆಕ್ಕಕ್ಕೇ ಇಟ್ಟುಕೊಳ್ಳದ ಮಂದಿ, ವರ್ತಕರು ನಾಮಕಾವಸ್ಥೆಗೆ ಅಲ್ಲಲ್ಲಿ ಮಾಸ್ಕ್ ಧರಿಸಿರುವುದು ಕಂಡು ಬಂದಿದೆ.
ಈ ಕುರಿತು ಮಾತನಾಡಿದ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ವಾರದ ಸಂತೆಗೆ ನಗರಸಭೆಯಿಂದ ಕಾರ್ಯಾದೇಶ ನೀಡಲಾಗಿಲ್ಲ. ಆದರೆ, ಸಂತೆ ಮಾಡಲಾಗಿದೆ. ಇದೊಂದು ಅನಧಿಕೃತ ಸಂತೆಯಾಗಿದೆ. ಈ ಬಗ್ಗೆ ಬಿಡ್ಡುದಾರರಲ್ಲಿ ಕೇಳಿದಾಗ ಸಂತೆಯ ಪೂರ್ವ ತಯಾರಿ ಎಂದು ತಿಳಿಸಿದ್ದಾರೆ.
ಕೊರೊನಾ ನಿಯಮ ಪಾಲಿಸಿಕೊಂಡು ಸಂತೆ ನಡೆಸುವುದಾಗಿ ತಿಳಿಸಿದ್ದರು. ತೊಂದರೆಯಾದರೆ ಅದಕ್ಕೆ ಅವರೇ ಜವಾಬ್ದಾರಿಯಾಗುತ್ತಾರೆ. ಏಪ್ರಿಲ್ ತಿಂಗಳಿನಿಂದ ಅವರಿಗೆ ಸಂತೆ ನಡೆಸಲು ಏಲಂ ಪ್ರಕಾರ ಅವಕಾಶ ಇದೆ. ಆದರೆ, ಅದಕ್ಕೆ ನಗರಸಭಾ ಆಡಳಿತ ಕಾರ್ಯಾದೇಶ ನೀಡಬೇಕಾಗಿದೆ ಎಂದಿದ್ದಾರೆ.