ಮಂಗಳೂರು: ದ. ಕನ್ನಡ ಜಿಲ್ಲೆಯ ಮೂಡುಬಿದಿರೆಯ ತಾಪಂ ಸದಸ್ಯರೋರ್ವರು ತಮ್ಮನ್ನು ಅಪಹರಣ ಮಾಡಲಾಗಿದೆ ಎಂದು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೂಡುಬಿದಿರೆ ತಾಲೂಕಿನ ಕಲ್ಲಮುಂಡ್ಕೂರು ತಾಪಂ ಸದಸ್ಯ ಸುಕುಮಾರ್ ಸನಿಲ್ ಅಪಹರಣಕ್ಕೊಳಗಾದವರು. ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಸುಕುಮಾರ್ ಸನಿಲ್ ಸೋಮವಾರ ಮೂಡುಬಿದಿರೆ ತಾಲೂಕು ಕಚೇರಿಯಲ್ಲಿ ನಡೆಯಬೇಕಿದ್ದ ತಾಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಅದನ್ನು ತಡೆಯಲು ನನ್ನನ್ನು ಅಪಹರಣಗೈದು ಉಡುಪಿಗೆ ತಂದು ಬಿಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರು ನೀಡುವ ಕೆಲವು ಗಂಟೆಗಳ ಮೊದಲು ಸುಕುಮಾರ್ ಸನಿಲ್ ಅವರು ಕಾಂಗ್ರೆಸ್ ಮುಖಂಡರೊಬ್ಬರಿಗೆ ಕರೆ ಮಾಡಿ ನನ್ನನ್ನು ಯಾರೋ ಅಪಹರಣ ಮಾಡಿ ಉಡುಪಿಗೆ ತಂದು ಬಿಟ್ಟಿದ್ದಾರೆ ಎಂದು ತುಳುವಿನಲ್ಲಿ ಸಂಭಾಷಣೆ ಮಾಡಿರುವ ಆಡಿಯೋ ವೈರಲ್ ಆಗಿದೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.