ಉಳ್ಳಾಲ: ಹರೇಕಳ-ಅಡ್ಯಾರ್ ಸೇತುವೆಯಿಂದ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಹಂಚಿಕೆಯಾಗಲಿರುವ ಕುಡಿಯುವ ನೀರಿನ ಯೋಜನೆ ಕಾಮಗಾರಿ ಕೈಗೊಂಡಿರುವ ಕರ್ನಾಟಕ ಜಲಮಂಡಳಿ, ಇನ್ನೂ ಉದ್ಘಾಟನೆಗೊಳ್ಳದ ಮಾದರಿ ರಸ್ತೆಯನ್ನೇ ಒಡೆಯಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮುಡಿಪು ಕಾಯರ್‍ಗೋಳಿಯಿಂದ ಕಂಬ್ಲಪದವುವರೆಗಿನ ರಸ್ತೆ ನಿರ್ಮಾಣಗೊಂಡು 5-6 ತಿಂಗಳಷ್ಟೇ ಕಳೆದಿದೆ. ಖಾಸಗಿ ಸಂಸ್ಥೆ ಅಧೀನದ ಟ್ರಸ್ಟ್ ದೇಣಿಗೆಯಡಿ ಹೆಚ್ಚಿನ ಮುತುವರ್ಜಿ ವಹಿಸಿ ಜಿಲ್ಲೆಯಲ್ಲೇ ಗ್ರಾಮಾಂತರ ಭಾಗದ ಮಾದರಿ ರಸ್ತೆಯಾಗಿ ನಿರ್ಮಾಣ ಮಾಡಲಾಗಿದೆ. ಆದರೀಗ ಕುಡಿಯುವ ನೀರಿನ ಯೋಜನೆ ಕಾಮಗಾರಿಯಿಂದಾಗಿ ಜಳಮಂಡಳಿ ಇದನ್ನು ಒಡೆಯಲು ಮುಂದಾಗಿದೆ ಎನ್ನಲಾಗಿದೆ.
ಸುಸಜ್ಜಿತ ಚರಂಡಿ, ದಾರಿ ದೀಪಗಳು, ಫುಟ್‍ಪಾತ್ ವ್ಯವಸ್ಥೆ, ರಸ್ತೆ ವಿಭಾಜಕದಲ್ಲಿ ಗಿಡಗಳು ಹೀಗೆ ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಎಲ್ಲಿಯೂ ಕಾಣದ ರಸ್ತೆ ಮುಡಿಪು ಭಾಗದಲ್ಲಿ ನಿರ್ಮಾಣವಾಗಿದೆ. ಲೋಕೋಪಯೋಗಿ ಇಲಾಖೆ ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಿದ್ದು, ಖಾಸಗಿ ಸಂಸ್ಥೆಯ ಕೋಟ್ಯಂತರ ರೂ. ದೇಣಿಗೆಯನ್ನೂ ರಸ್ತೆ ಅಭಿವೃದ್ಧಿಗೆ ನೀಡಲಾಗಿದೆ.
ರಸ್ತೆ ನಿರ್ಮಾಣದ ಸಂದರ್ಭ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಸಂಸ್ಥೆಯ 5 ಮಂದಿ ಇಂಜಿನಿಯರ್ಗಳು ಸ್ಥಳದಲ್ಲೇ ಇದ್ದು, ರಸ್ತೆ ಗುಣಮಟ್ಟವನ್ನು ಪರಿಶೀಲಿಸಿಯೇ ಕಾಮಗಾರಿ ಮುಗಿಸಲಾಗಿದೆ. ಇದೀಗ ರಸ್ತೆಯನ್ನು ಒಡೆಯಲು ಕರ್ನಾಟಕ ಜಲಮಂಡಳಿ ಮುಂದಾಗಿದೆ. ರಸ್ತೆ ಬದಿಯ ಸರ್ಕಾರಿ ಭೂಮಿಯಲ್ಲೇ ಪೈಪ್‍ಲೈನ್ ಅಳವಡಿಸುವುದಾಗಿ ಡಿಪಿಆರ್ ಸಿದ್ಧಪಡಿಸಲಾಗಿತ್ತು. ಆದರೆ ಈಗ ಏಕಾಏಕಿ ಬದಲಾಯಿಸಲಾಗಿದೆ ಅನ್ನುವ ಆರೋಪ ಕೇಳಿ ಬಂದಿದೆ.