ಮಂಗಳೂರು: ನೌಕರರಿಗೆ ವಿನಾಕಾರಣ ಕಿರುಕುಳ ನೀಡಿ, ದಬ್ಬಾಳಿಕೆ ನಡೆಸುತ್ತಿರುವ ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ದ.ಕ.ಜಿಲ್ಲಾ ಸಮಿತಿಯು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಧರಣಿ ನಡೆಸಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್ ಮಾತನಾಡಿ, ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಎನ್. ಅರುಣ್ ಕುಮಾರ್ ಅವರು ಈ ಹಿಂದೆ ಚಿಕ್ಕಮಗಳೂರು, ದಾವಣಗೆರೆಯಲ್ಲಿದ್ದು, ಅಲ್ಲಿಯೂ ನೌಕರರಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಅವರನ್ನು ಇಲ್ಲಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಲಾಯಿತು. ನಿಜವಾಗಿಯೂ ಅವರ ಮೇಲೆ ತನಿಖೆ ಕೈಗೊಂಡು ಅಮಾನತು ಆಗಬೇಕಿತ್ತು. ಈ ವಿಚಾರದ ಬಗ್ಗೆ ಶಾಸಕ ಚಂದ್ರಪ್ಪ, ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ, ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಇವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಇಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅರುಣ್ ಕುಮಾರ್ ಅವರು ನೌಕರರನ್ನು ಮನೆಯ ಕೆಲಸದಾಳಿಗಿಂತ ಕಡೆಯಾಗಿ ನೋಡುತ್ತಿದ್ದಾರೆ. ಮಹಿಳಾ ಸಿಬ್ಬಂದಿಯನ್ನು ಅಗೌರವದಿಂದ ಕಾಣುತ್ತಿದ್ದಾರೆ. ಅವರು ಮಾತ್ರವಲ್ಲದೇ ಅವರ ಹಿಂಬಾಲಕರೂ ನೌಕರರಿಗೆ ಕಿರುಕುಳ ನೀಡುತ್ತಿದ್ದಾರೆ. ಸಂಸದ ನಳಿನ್ ಕುಮಾರ್ ಅವರು ಜಿಲ್ಲೆಗೆ ಬೆಂಕಿ ಕೊಡಲು ಗೊತ್ತಿದೆ ಎಂದು ಹೇಳುತ್ತಾರೆ. ಆದರೆ ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿದ್ದರೂ ಅವರ ಸುದ್ದಿಯಿಲ್ಲ. ಇಂತಹ ಅಧಿಕಾರಿಗಳಿಗೆ ಇವರೇ ಬೆಂಗಾವಲಾಗಿದ್ದಾರೆ ಎಂದು ಅನಿಸುತ್ತದೆ. ಹಣ ಕೊಡದೆ ಯಾವುದೇ ವರ್ಗಾವಣೆ ನಡೆಯುತ್ತಿಲ್ಲ. ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಎನ್.ಅರುಣ್ ಕುಮಾರ್ ನೌಕರರು ಧ್ವನಿ ಎತ್ತದ ರೀತಿ ಮಾಡಿದ್ದಾರೆ. ಅದಕ್ಕಾಗಿ ಅವರು ನೌಕರರು ಈ ಬಗ್ಗೆ ಯಾವುದೇ ಪ್ರತಿಭಟನೆ ನಡೆಸದಂತೆ ಕೋರ್ಟ್ ನಿಂದ ತಡೆ ತಂದಿದ್ದಾರೆ. ಇದು ತಮ್ಮ ಭ್ರಷ್ಟಾಚಾರದ ವಿಚಾರ ಹೊರಬರಬಾರದೆಂದು ನೌಕರರನ್ನು ದಮನ ಮಾಡುವ ನೀತಿಯಾಗಿದೆ ಎಂದು ಎಂ.ದೇವದಾಸ್ ದೂರಿದರು.
ರಾಜ್ಯದ ಯಡಿಯೂರಪ್ಪ ಸರ್ಕಾರಕ್ಕೆ ಕಿವಿ ಮತ್ತು ಕಣ್ಣಿದ್ದಲ್ಲಿ ತಕ್ಷಣ ಅರುಣ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಿ. ಇದೊಂದು ನಿಗಮ ಅಲ್ಲ, ಜೀತದಾರರ ಕಾರ್ಯಾಗಾರವಾಗಿದೆ. ಇದೊಂದು ಸಾಂಕೇತಿಕ ಪ್ರತಿಭಟನೆಯಾಗಿದ್ದು ಕೆಎಸ್ಆರ್ಟಿಸಿ ವಿಭಾಗಾಧಿಕಾರಿಯ ಬಗ್ಗೆ ಅಮೂಲಾಗ್ರವಾಗಿ ತನಿಖೆ ನಡೆಸಿ ಅಮಾನತು ಮಾಡದಿದ್ದಲ್ಲಿ ಇನ್ನೂ ಉಗ್ರವಾದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಂ.ದೇವದಾಸ್ ಎಚ್ಚರಿಕೆ ನೀಡಿದರು.