ಬಂಟ್ವಾಳ: ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿರುವ ಮಹಮ್ಮದ್ ಯಾಸೀರ್ ಅವರ ಮನೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದೆ. ಮನೆಯನ್ನೇ ಅವರು ಮ್ಯೂಸಿಯಂ ಮಾಡಿದ್ದಾರೆ.
ಸಾಮಾನ್ಯವಾಗಿ ನಾಣ್ಯ ಸಂಗ್ರಹ, ನೋಟುಗಳನ್ನು ಸಂಗ್ರಹಿಸಿಡುವುದನ್ನು ಎಲ್ಲರೂ ಮಾಡುತ್ತಾರೆ. ಆದರೆ ಯಾಸೀರ್ ಅವರು ಅವುಗಳಲ್ಲೂ ವೈವಿಧ್ಯಗಳನ್ನು ತಂದಿಡುತ್ತಾರೆ. ಅಮೇರಿಕಾದ ಅಧ್ಯಕ್ಷರು, ಗಣ್ಯರು, ಸಾಹಿತಿಗಳು, ಅವರ ಜನ್ಮದಿನಾಂಕದ ಸೀರಿಯಲ್ ನಂಬರ್ಗಳು, ದೇಶ ವಿದೇಶಗಳ ನೋಟು, ನಾಣ್ಯಗಳಲ್ಲಿರುವ ಸೀರಿಯಲ್ ನಂಬರ್ಗಳ ಚಮತ್ಕಾರಗಳು ಇಲ್ಲಿವೆ. ಇವುಗಳನ್ನು ಸಂಪಾದಿಸಲು ಕೆಲವೊಮ್ಮೆ ದುಪ್ಪಟ್ಟು ಶ್ರಮಪಡಬೇಕಾಗುತ್ತದೆ. ಆದರೆ ಎಳವೆಯಿಂದಲೇ ಆರಂಭಿಸಿದ ಮಹಮ್ಮದ್ ಯಾಸೀರ್ ಅವರ ಈ ಹವ್ಯಾಸವೀಗ ರಾಷ್ಟ್ರದ ಗಮನ ಸೆಳೆದಿದೆ. ಮುಂಬೈ ಸಹಿತ ರಾಜ್ಯ, ರಾಷ್ಟ್ರದ ಹಲವು ಭಾಗಗಳಲ್ಲಿ ಅವರು ಪ್ರದರ್ಶನ ನೀಡಿದ್ದಾರೆ. ದೇಶ, ವಿದೇಶಗಳಿಂದ ಗಣ್ಯರು ಅವರ ಮ್ಯೂಸಿಯಂಗೆ ಭೇಟಿ ನೀಡುತ್ತಿದ್ದಾರೆ.
10 ರೂಪಾಯಿ ನೋಟುಗಳಲ್ಲಿ 48 ಸಾಹಿತಿ, 22 ಮುಖ್ಯಮಂತ್ರಿ, 15 ಪ್ರಧಾನಿ, 15 ರಾಷ್ಟ್ರಪತಿಗಳ ಜನ್ಮದಿನಾಂಕವನ್ನು ಬಿಂಬಿಸುವ ನಂಬರ್ಗಳಿರುವ ಕರೆನ್ಸಿಗಳು ಅವರಲ್ಲಿವೆ. ಒಂದೇ ನಂಬರ್ನ 200 ನೋಟುಗಳನ್ನೂ ಸಂಗ್ರಹಿಸಿಟ್ಟಿದ್ದಾರೆ. ಕರೆನ್ಸಿ ನೋಟುಗಳು ಒಂದು ಸೀರಿಯಲ್ನಲ್ಲಿ ಒಂದು ನಂಬರ್ನಲ್ಲಿ ಪ್ರಿಂಟ್ ಆಗುತ್ತದೆ. ಅದಾಗಿ 10 ಲಕ್ಷ ನೋಟುಗಳು ಮುದ್ರಣವಾದ ಬಳಿಕ ಮತ್ತೊಂದು ಸೀರಿಯಲ್ಗೆ ಅದೇ ನಂಬರ್ನ ನೋಟುಗಳು ಮುದ್ರಣವಾಗುತ್ತವೆ. ಇದೇ ರೀತಿ ಅವರು 2014ನೇ ಇಸವಿಯಲ್ಲಿ ಮುದ್ರಣಗೊಂಡ ಗವರ್ನರ್ ರಘುರಾಮ ಜಿ.ರಾಜನ್ ಕಾಲದ 000036 ನಂಬರ್ನ 200 ನೋಟುಗಳನ್ನು ಸಂಗ್ರಹಿದ್ದಾರೆ.