ಪುತ್ತೂರು(ದಕ್ಷಿಣ ಕನ್ನಡ): ಹಲಸಿನ ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಸಿಹಿಪ್ರಿಯರಾದ ಕರಾವಳಿ ಮಂದಿಯಂತೂ ವಿವಿಧ ಬಗೆಯ ಖಾದ್ಯ, ದೋಸೆಗಳನ್ನು ತಯಾರಿಸಿ ಸವಿಯುತ್ತಾರೆ. ಅಂತೆಯೇ ಮುತ್ತಿನ ನಗರಿ ಪುತ್ತೂರಿನಲ್ಲಿ ಎರಡು ದಿನಗಳ ಕಾಲ ಹಲಸು ಹಬ್ಬ ಆಯೋಜನೆಗೊಂಡಿತ್ತು.
ಉಂಡು ಮಾವು ತಿನ್ನು, ಹಸಿದು ಹಲಸು ತಿನ್ನು ಎನ್ನುವ ಮಾತಿದೆ. ಹಲಸು ಕೇವಲ ಹಣ್ಣಲ್ಲ ಸಂಬಂಧ ನೆನಪಿಸುವ ಹಣ್ಣು. ಅಜ್ಜಿ, ತಾತ ನೆಟ್ಟ ಹಲಸಿನ ಗಿಡ ಮಕ್ಕಳು, ಮೊಮ್ಮಕ್ಕಳು ಕಾಲಕ್ಕೂ ಫಲ ಕೊಡುತ್ತದೆ. ಆ ಮೂಲಕ ಹಿರಿಯರ ನೆನಪನ್ನು ಜೀವಂತವಾಗಿಡುತ್ತದೆ. ಅಂತಹ ಹಣ್ಣನ್ನು ಇಷ್ಟಪಡದವರಿಲ್ಲ. ಎಲ್ಲ ವಯಸ್ಸಿನವರಿಗೂ ಇದು ಫೇವರಿಟ್.
ಅಂತೆಯೇ ಮುತ್ತಿನ ನಗರಿ ಪುತ್ತೂರಿನಲ್ಲಿ ಹಲಸಿನ ಹಬ್ಬ ನಡೆಯಿತು. ನವತೇಜ ಟ್ರಸ್ಟ್ ಪುತ್ತೂರು, ಬೆಂಗಳೂರು ಭಾರತೀಯ ತೋಟಗಾರಿಕಾ ಸಂಸ್ಥೆ ಹಾಗೂ ಜೆಸಿಐ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮೇಳದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಹಲಸಿನಿಂದ ತಯಾರಾದ ಬಗೆ ಬಗೆಯ ತಿಂಡಿ ಸವಿದು ಹೊಸ ರುಚಿಯ ಅನುಭವ ಪಡೆದರು. ಎರಡು ದಿನಗಳ ಕಾಲ ಪುತ್ತೂರಿನ ಜೈನ ಭವನದಲ್ಲಿ ಹಲಸಿನ ಹಬ್ಬವನ್ನು ಸಖತ್ ಆಗಿ ಜನರು ಎಂಜಯ್ ಮಾಡ್ತಾ ಇದ್ದಾರೆ.
ಇನ್ನು ಕೇವಲ ಹಲಸಿನಿಂದಲೇ ತಯಾರಾಗಿದ್ದ ತಿಂಡಿಗಳು ಜನರು ಬಾಯಿ ಚಪ್ಪರಿಸುವಂತೆ ಮಾಡಿತ್ತು. ಹಲಸಿನ ಕಾಯಿ ಪಕೋಡ, ಹಲಸಿನ ಕೇಕ್, ವಡೆ, ಹಲ್ವಾ, ಚಿಪ್ಸ್, ದೋಸೆ, ಕಬಾಬ್, ಪಾಯಸ, ಕೊಟ್ಟಿಗೆ, ಪೋಡಿ ಹೀಗೆ ಇದರ ಜೊತೆ ಹಲಸಿನ ಹಣ್ಣಿನ ಐಸ್‌ಕ್ರೀಂಗೆ ಜನ ಕ್ಯೂ ನಿಂತಿದ್ದರು.
ಹಲಸಿನ ಹಣ್ಣಿನ ಜೊತೆ ಜೊತೆಗೆ ಕೆಲವು ಆರೋಗ್ಯಕರ ತಿಂಡಿ ತಿನಿಸುಗಳನ್ನು ಮೇಳದಲ್ಲಿ ಇಡಲಾಗಿತ್ತು. ಜೊತೆಗೆ ಹಲಸು ಪ್ರಿಯರಿಗಾಗಿ ವಿವಿಧ ಸ್ಪರ್ಧೆಗಳನ್ನ ಆಯೋಜಿಸಲಾಗಿತ್ತು. ಇವೆಷ್ಟೇ ಹಲಸಿನ ಹಬ್ಬದ ಹೈಲೈಟ್ಸ್ ಅನ್ಕೊಬೇಡಿ ಇಲ್ಲಿ ವಿವಿಧ ಜಾತಿಯ ಹಲಸಿನ ಹಣ್ಣಿನ ಹಲವಾರು ತಳಿಗಳನ್ನು ಮಾರಾಟಕ್ಕಿಡಲಾಗಿತ್ತು.
ಅಂತಹ ತಳಿಗಳ ಬಗ್ಗೆ ಮಾಹಿತಿ ನೀಡಲು ಮತ್ತು ಉಳಸಿಕೊಳ್ಳುವ ನಿಟ್ಟಿನಲ್ಲಿ ಹಲಸಿನ ಹಬ್ಬ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಅಪರೂಪದ ತಳಿಗಳ ಬಗ್ಗೆ ಮಾಹಿತಿ ನೀಡಿದ ಆಯೋಜಕರು, ಜನರಿಗೆ ಉಪಯೋಗಗಳ ಬಗ್ಗೆ ತಿಳಿಸಿದರು. ಕೆಂಪು ಹಲಸು, ತೂಬಗೆರೆ ಹಲಸು, ರುದ್ರಾಕ್ಷಿ ಹಲಸು, ಸರ್ವಋತು ಹಲಸು, ಸಿದ್ಧಾ ಹಲಸು ಹೀಗೆ ಮೂವತ್ತು ಜಾತಿಯ ತಳಿಗಳ ಸಸಿಗಳನ್ನು ಮಾರಾಟಕ್ಕಿಡಲಾಗಿತ್ತು. ಸಸಿಗಳ ಬಗ್ಗೆ ಮಾಹಿತಿ ಪಡೆದ ಹಲವಾರು ಜನರು ಅವುಗಳನ್ನು ಖರೀದಿಸುವ ಹಲಸು ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು.
ಈ ಮೇಳದಲ್ಲಿ ಪಾಲ್ಗೊಂಡ ಹಲಸಿನ ಪ್ರಿಯರು ಮಾತನಾಡಿ, ಪುತ್ತೂರಿನ ಜನತೆಗೆ ಖುಷಿಯ ವಿಚಾರ, ಹಲಸಿನ ಸೀಸನ್ ಮುಗಿಯುತ್ತಿದೆ, ಆದರೆ ಇಲ್ಲಿ ಹಲಸಿನ ಹಬ್ಬ ಆಯೋಜಿಸಿರುವುದರಿಂದ ಎಲ್ಲರಿಗೂ ಬೇರೆ ಬೇರೆ ರೀತಿಯ ಹಲಸಿನ ಹಣ್ಣನ್ನು ಸವಿಯುವ ಅವಕಾಶ ದೊರಕಿದೆ. ಪ್ರತಿ ವರ್ಷ ಈ ಮೇಳ ನಡೆಯುತ್ತದೆ. ಪ್ರತಿ ಬಾರಿಯು ಬರುತ್ತೇವೆ. ನಾವು ಇಲ್ಲಿ ಖಾದ್ಯಗಳ ರುಚಿ ನೋಡಿದೆವು, ಕೆಲವು ಹಲಸುಗಳನ್ನು ಖರೀದಿಸಿದೆವು ಎಂದು ಮೇಳದ ಕುರಿತು ಸಂತಸ ವ್ಯಕ್ತ ಪಡಿಸಿದರು.
ಇದನ್ನೂ ಓದಿ: ಕಾರವಾರ: ಪ್ರವಾಸಕ್ಕೆ ಬಂದು ಉಚಿತ ಬಸ್ ಸಿಗದೆ ಪರದಾಡಿದ ಮಹಿಳೆಯರು