ಮಂಗಳೂರು: ಬಳ್ಳಾರಿಯಲ್ಲಿ ಕೋವಿಡ್ ಸೋಂಕಿತರ ಮೃತದೇಹಗಳನ್ನು ಒಂದೇ ಗುಂಡಿಯಲ್ಲಿ ಹೂತ್ತಿದ್ದು ನಾಚಿಕೆಗೇಡಿನ ಸಂಗತಿ. ಆರೋಗ್ಯ ಸಚಿವರು ಇದರ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆಗ್ರಹಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ 3,300 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಹೈಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದೆ. ಇದು ಶುದ್ಧ ಸುಳ್ಳು ಹಾಗೂ ಅವ್ಯವಹಾರದಿಂದ ಕೂಡಿದ ಲೆಕ್ಕಾಚಾರ. ಕೋವಿಡ್ಗೆ ಬಲಿ ಆಗುವವರ ಹಣದಲ್ಲಿ ಅವ್ಯವಹಾರ ನಡೆಸಿದರೇ ಯಾರೂ ಉದ್ಧಾರ ಆಗೋದಿಲ್ಲ. ಈ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಕೊರೊನಾ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ದ.ಕ. ಜಿಲ್ಲಾಡಳಿತ ವಿಫಲವಾಗಿದೆ. ಜಿಲ್ಲಾಡಳಿತ ಏಕಪಕ್ಷೀಯವಾಗಿ ಜನವಿರೋಧಿ ತೀರ್ಮಾನ ಕೈಗೊಳ್ಳುತ್ತಿದೆ. ಸೋಂಕಿತರು ಸರ್ಕಾರಿ ಆಸ್ಪತ್ರೆಗೆ ಹೋದರೇ ಬೆಡ್ ಇದ್ದರೂ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದರು.
ಖಾಸಗಿ ಆಸ್ಪತ್ರೆಗಳ ಖರ್ಚು ವೆಚ್ಚವನ್ನು ಬಿಪಿಎಲ್, ಎಪಿಎಲ್ ಎಂದು ನೋಡದೆ ಸರ್ಕಾರವೇ ಭರಿಸಲಿ. ಪ್ಯಾಕೇಜ್ ಮಾಡುವುದಾದಲ್ಲಿ ಸರ್ಕಾರ ಏಕೆ ಬೇಕು? ಆದ್ದರಿಂದ ತಕ್ಷಣ ಜಿಲ್ಲಾಧಿಕಾರಿಯವರು ಎಲ್ಲಾ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಲಿ ಎಂದು ಡಿಸೋಜ ಹೇಳಿದರು.