ಮಂಗಳೂರು: ನ್ಯಾಯಾಲಯದಿಂದ ಹಿಂದೂ ಎಂದು ಆದೇಶ ಪಡೆದಿದ್ದರೂ ಮುಸ್ಲಿಂ ಎಂದು ನಮೂದಿಸಿ ಮಂಗಳೂರು ಮಹಾನಗರ ಪಾಲಿಕೆಯ 19ನೇ ವಾರ್ಡ್ನ ಅಭ್ಯರ್ಥಿ ಸಂಗೀತ ಆರ್.ನಾಯಕ್ ಚುನಾವಣಾ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಮಪತ್ರ ಪರಿಶೀಲನೆ ವೇಳೆ ಸಂಗೀತಾ ಅವರು ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಚುನಾವಣಾ ಅಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದ್ದರೂ ನಾಮಪತ್ರ ಅಂಗೀಕಾರವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಈ ಕುರಿತು ಹೈಕೋರ್ಟ್ ಮಟ್ಟಿಲೇರುತ್ತೇವೆ ಎಂದು ಹೇಳಿದರು.
ಪಚ್ಚನಾಡಿ ವಾರ್ಡ್ನಲ್ಲಿ ಹಿಂದುಳಿದ ವರ್ಗ 'ಎ' ವಿಭಾಗದ ಮಹಿಳಾ ಅಭ್ಯರ್ಥಿಗೆ ಮೀಸಲಾತಿ ಇದೆ. ಆದರೆ ಬಿಜೆಪಿಯಿಂದ ಇದಕ್ಕೆ ನಾಮಪತ್ರ ಸಲ್ಲಿಸಿರುವ ಸಂಗೀತಾ ಆರ್. ನಾಯಕ್ ಅವರು ತಮ್ಮ ಜಾತಿಯನ್ನು ಮುಸ್ಲಿಂ ಎಂದು ನಮೂದಿಸಿದ್ದಾರೆ. ಆದರೆ ಹುಟ್ಟಿನಿಂದ ಮುಸ್ಲಿಂ ಆಗಿರುವ ಇಸ್ರತ್ ಬೇಗಂ ಎಂಬ ಮಹಿಳೆ ರವೀಂದ್ರ ನಾಯಕ್ರನ್ನು ವಿವಾಹವಾದ ಬಳಿಕ ಸಂಗೀತಾ ಆರ್. ನಾಯಕ್ ಎಂದು ಹೆಸರು ಬದಲಾಯಿಸಿದ್ದಾರೆ. ಅಲ್ಲದೆ 2017ರಲ್ಲಿ ತಮ್ಮ ಜನನ ಪ್ರಮಾಣ ಪತ್ರ, ಆಧಾರ್, ವೋಟರ್ ಐಡಿ ಇತ್ಯಾದಿ ದಾಖಲೆಗಳಲ್ಲೂ ತಮ್ಮ ಜಾತಿಯನ್ನು ಹಿಂದೂ ಎಂದು ಬದಲಾಯಿಸಿದ್ದಾರೆ.
ಅದಕ್ಕೆ ಸಮ್ಮತಿಸಿದ ನ್ಯಾಯಾಲಯವೂ ಆಕೆಯನ್ನು ಹಿಂದೂ ಎಂದು ಹೇಳಿ ತೀರ್ಪು ನೀಡಿದೆ. ಆದರೆ ಇದೀಗ ಸಂಗೀತಾ ಆರ್. ನಾಯಕ್ ನ್ಯಾಯಾಲಯ ನೀಡಿರುವ ತೀರ್ಪನ್ನು ಉಲ್ಲಂಘನೆ ಮಾಡಿ ಮುಸ್ಲಿಂ ಎಂದು ಹೇಳಿಕೊಂಡು ನಾಮಪತ್ರ ಸಲ್ಲಿಸಿದ್ದಾರೆ. ಹಿಂದೂ ಎಂದು ಜನನ ಪ್ರಮಾಣ ಪತ್ರದಲ್ಲಿ ದಾಖಲಾಗಿರುವ ಮಹಿಳೆ ಮುಸ್ಲಿಂ ಆಗಲು ಹೇಗೆ ಸಾಧ್ಯ. ಇಂತಹ ಪ್ರಕರಣದಲ್ಲಿ ಚುನಾವಣಾ ಅಧಿಕಾರಿಗಳಿಗೆ ನಾಮ ಪತ್ರ ತಿರಸ್ಕರಿಸಿ ಕ್ರಮ ಕೈಗೊಳ್ಳುವ ಎಲ್ಲಾ ಹಕ್ಕುಗಳಿವೆ ಎಂದು ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ತಿಳಿಸಿದರು.