ಮಂಗಳೂರು: ರಾಜ್ಯದ ಬಿಜೆಪಿಯ 25 ಸಂಸದರು ಸಂಸತ್ ಸಭೆಯಲ್ಲಿ ಮಾತನಾಡುತ್ತಿಲ್ಲ. ಇವರೆಲ್ಲರೂ ಕರ್ನಾಟಕವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುವಲ್ಲಿ ಅಸಮರ್ಥರಾಗಿದ್ದಾರೆ. ಎಲ್ಲರೂ ಜನತೆಯ ಮುಂದೆ ಕ್ಷಮೆಯಾಚಿಸಿ, ರಾಜೀನಾಮೆ ನೀಡಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆಗ್ರಹಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಬರುವ ಪಾಲು ತನ್ನಿ ಎಂದು ಸಂಸದರನ್ನು ಲೋಕಸಭೆಗೆ ಕಳುಹಿಸಲಾಗುತ್ತದೆ. ನಿಮಗೆ ಪ್ರಧಾನಿಯಲ್ಲಿ, ಇಲಾಖೆಯ ಸಚಿವರಲ್ಲಿ ಮಾತನಾಡುವ ಶಕ್ತಿ ಇಲ್ಲ. ಲೋಕಸಭೆಯಲ್ಲೂ ಬಾಯ್ಬಿಡುವುದಿಲ್ಲವಾದರೆ ರಾಜೀನಾಮೆ ಕೊಡಿ ಎಂದು ಕಾಂಗ್ರೆಸ್ ಆಂದೋಲನ ನಡೆಸುತ್ತದೆ ಎಂದು ಹೇಳಿದರು.
ಕಳೆದ ಬಾರಿ ನೆರೆಹಾವಳಿಯಿಂದ ರಾಜ್ಯದಲ್ಲಿ 35 ಸಾವಿರ ಕೋಟಿ ರೂ. ನಷ್ಟವಾಗಿತ್ತು. ಆದರೆ ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ 1,875 ಕೋಟಿ ರೂ. ಮಾತ್ರ. ಈ ಬಾರಿ ನೆರೆ ಬಂದಾಗ 4 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದ್ದರೆ, ಕೇಂದ್ರದಿಂದ ಕೇವಲ 395 ಕೋಟಿ ರೂ. ಪರಿಹಾರ ಬಂದಿದೆ. ಇವರು ಕೊಡುವುದೇ ಶೇಕಡಾ 10 ಕ್ಕಿಂತ ಕಡಿಮೆ. ಉಳಿದ 90 ಪ್ರತಿಶತ ಪರಿಹಾರ ಎಲ್ಲಿಗೆ ಹೋಯಿತು?. ಜಿಎಸ್ ಟಿಯಲ್ಲಿ 8 ಸಾವಿರ ಕೋಟಿ ರೂ. ಹಣ ಬರಬೇಕಿದೆ. ಹಾಗಾದರೆ 25 ಜನ ಸಂಸತ್ ಸದಸ್ಯರು ದೆಹಲಿಗೆ ಚಹಾ-ಕಾಫಿ ಕುಡಿಯಲು ಹೋಗಿದ್ದಾರೆಯೇ?. ಈ ಬಗ್ಗೆ ಯಾಕೆ ಲೋಕಸಭೆಯಲ್ಲಿ ಮಾತನಾಡುತ್ತಿಲ್ಲ ಎಂದು ಐವನ್ ಪ್ರಶ್ನಿಸಿದರು.
ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷದ ಆಳ್ವಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷರು ಸ್ವರ್ಣಯುಗ ಎಂದಿದ್ದಾರೆ. ಈ ಸ್ವರ್ಣಯುಗದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಓಡಾಡುವಂತಾಯಿತು, ಮನೆಯೊಳಗೆ ಕುಳಿತುಕೊಳ್ಳುವಂತಾಯಿತು, ರಸ್ತೆಗಳಲ್ಲಿ ಬಿದ್ದು ಜನರು ಸಾಯುವಂತಾಯಿತು ಎಂದು ವಾಗ್ದಾಳಿ ನಡೆಸಿದರು. ಇದೀಗ ಸರ್ಕಾರದ ಖಜಾನೆ ಖಾಲಿಯಾಗಿದೆ. ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ ದಿನನಿತ್ಯದ ಸಾಮಾಗ್ರಿಗಳ ಬೆಲೆ ಗಗನಕ್ಕೇರಿಸಿದ್ದೇ ಬಿಜೆಪಿಯವರ ಸ್ವರ್ಣಯುಗ ಎಂದು ಐವನ್ ಡಿಸೋಜ ವ್ಯಂಗ್ಯವಾಡಿದರು.