ಮಂಗಳೂರು : ಬಜೆಟ್ನಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ ಮಂಡಳಿ ಮಾಡಲು ಹಣ ಮೀಸಲಿಟ್ಟಿದ್ದನ್ನು ರದ್ದುಗೊಳಿಸಿ ಸಿಎಂ ಯಡಿಯೂರಪ್ಪನವರು ಕ್ರೈಸ್ತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕೂಡಲೇ ಈ ಬಗ್ಗೆ ಪುನರ್ ಪರಿಶೀಲನೆ ನಡೆಸಿ, ಕ್ರೈಸ್ತ ಸಮುದಾಯ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. ಇಲ್ಲದಿದ್ದಲ್ಲಿ ರಾಜ್ಯದ ಕ್ರೈಸ್ತ ಸಮುದಾಯವನ್ನು ಎಬ್ಬಿಸಿ, ಬೀದಿಗಿಳಿದು ಹೋರಾಟ ಮಾಡುತ್ತೇವೆ. ಇದಕ್ಕೆ ರಾಜ್ಯ ಸರ್ಕಾರ ನೇರ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕದಲ್ಲಿರುವ ಮರಾಠಿ ಸಮುದಾಯದವರ ಅಭಿವೃದ್ಧಿಗೆ ನಿಗಮ ಮಾಡಿ, 50 ಕೋಟಿ ರೂ. ಮೀಸಲಿರಿಸಿರುವ ರಾಜ್ಯ ಸರ್ಕಾರದ ನಡೆಯ ಬಗ್ಗೆ ಬಹಳಷ್ಟು ಚರ್ಚೆಗಳಾಗುತ್ತಿವೆ. ವೀರಶೈವ- ಲಿಂಗಾಯತರೂ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ರೈಸ್ತ ಸಮುದಾಯಕ್ಕೂ ಪ್ರತ್ಯೇಕ ಅಭಿವೃದ್ದಿ ಮಂಡಳಿ ಮಾಡಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಎಚ್ಚರಿಕೆಯ ಧ್ವನಿ ಕೇಳುತ್ತಲೇ, ಸಿಎಂ ಯಡಿಯೂರಪ್ಪನವರು 24 ಗಂಟೆಯೊಳಗೆ ವೀರಶೈವ-ಲಿಂಗಾಯತರಿಗೆ ಅಭಿವೃದ್ಧಿ ನಿಗಮ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಬೇರೆ ಬೇರೆ ಸಮುದಾಯದವರಿಗೆ ಅಭಿವೃದ್ಧಿ ಮಂಡಳಿ ಇದೆ. ಕ್ರೈಸ್ತ ಸಮುದಾಯದವರು ಸಾಕಷ್ಟು ವರ್ಷಗಳಿಂದ ಈ ಬಗ್ಗೆ ಬೇಡಿಕೆ ಇಟ್ಟಿದ್ದರೂ ಇನ್ನೂ ಕ್ರೈಸ್ತ ಅಭಿವೃದ್ಧಿ ಮಂಡಳಿ ಆಗಿಲ್ಲ. ಸರ್ಕಾರ ಕ್ರೈಸ್ತರ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. 2013-18 ರವರೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ರೈಸ್ತ ಸಮುದಾಯದ ಮೇಲೆ ಸರಣಿ ದಾಳಿ ನಡೆದಿದೆ, ಆದರೂ ಕ್ರೈಸ್ತರು ಸಹಿಸಿಕೊಂಡರು. ಇದರ ತನಿಖೆಗಾಗಿ ಆಯೋಗ ರಚನೆ ಮಾಡಲಾಯಿತು. ಆಯೋಗದ ತೀರ್ಮಾನ ಏನು ಎಂದು ಕೇಳಿದರೆ ಇಂದಿಗೂ ಗೊತ್ತಿಲ್ಲ. ರಾಜ್ಯದ, ದೇಶದ ಅಭಿವೃದ್ಧಿಯಲ್ಲಿ ಕ್ರೈಸ್ತರ ಪಾಲೂ ಇದೆ. ಬಡ ವರ್ಗದ ಕ್ರೈಸ್ತರಿಗೆ ಈ ರೀತಿ ಅನ್ಯಾಯ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಕ್ರೈಸ್ತ ಸಮುದಾಯದವರು ವಿದೇಶಕ್ಕೆ ತೆರಳಿ ಉನ್ನತ ವ್ಯಾಸಂಗ ಮಾಡುವುದಾದರೆ 20 ಲಕ್ಷ ರೂ. ನೀಡಲಾಗುತ್ತಿತ್ತು. ಅದನ್ನು ರದ್ದು ಮಾಡಲಾಯಿತು. ವಾಹನ ಖರೀದಿಸಿದಲ್ಲಿ 5 ಲಕ್ಷ ರೂ. ಅನುದಾನ ನೀಡಲಾಗುತ್ತಿತ್ತು. ಅದನ್ನೂ, ಎರಡು ಲಕ್ಷಕ್ಕೆ ಇಳಿಸಲಾಯಿತು. ಶಾದಿ ಭಾಗ್ಯದಂತಹ ಸಾಮಾನ್ಯ ಕಾರ್ಯಕ್ರಮವನ್ನು ರದ್ದು ಪಡಿಸಲಾಯಿತು. ಇಂಜಿನಿಯರಿಂಗ್, ಮೆಡಿಕಲ್ ಓದುವವರಿಗೆ ವರ್ಷಕ್ಕೆ ನೀಡುವ 3.50 ಲಕ್ಷ ರೂ.ವನ್ನು ಎರಡು ಲಕ್ಷಕ್ಕೆ ಇಳಿಸಲಾಯಿತು. ಗಂಗಾ ಕಲ್ಯಾಣ ಯೋಜನೆಯನ್ನು ರದ್ದುಗೊಳಿಸಲಾಯಿತು. ಕ್ರೈಸ್ತ ಅಭಿವೃದ್ಧಿ ನಿಗಮ ಮಂಡಳಿಯನ್ನು ರದ್ದು ಪಡಿಸಲಾಯಿತು. ಈ ಬಗ್ಗೆ ಸಿಎಂ ಉತ್ತರ ನೀಡಲಿ ಎಂದು ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು.