ಮಂಗಳೂರು: ಕೊರೊನಾ ಸೋಂಕಿತರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಇಲ್ಲವೆಂದು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಆದರೆ ಅಲ್ಲಿ ತಗಲುವ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಬಿಲ್ ಮಾಡಿದರೆ ಜನಸಾಮಾನ್ಯರಿಗೆ ಅದನ್ನು ಕಟ್ಟಲು ಕಷ್ಟ. ಆರೋಗ್ಯ ಭಾಗ್ಯ ಯೋಜನೆಯಲ್ಲಿ ಚಿಕಿತ್ಸೆ ವೆಚ್ಚವನ್ನು ಪಡೆಯಲಿ ಅಥವಾ ಆ ಬಿಲ್ಲನ್ನು ಸರ್ಕಾರವೇ ಕಟ್ಟಲಿ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ದರ ನಿಗದಿಪಡಿಸಿಲ್ಲ. ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದಂತೆ ಸರ್ಕಾರ ಜನರನ್ನು ಕೈಬಿಟ್ಟಂತೆ ಭಾಸವಾಗುತ್ತಿದೆ. ಸರ್ಕಾರಕ್ಕೆ ಜನರ ಆರೋಗ್ಯ ರಕ್ಷಣೆ ಮುಖ್ಯವೋ, ಸರ್ಕಾರದ ಆರ್ಥಿಕತೆ ಮುಖ್ಯವೋ ಎಂಬುದು ತಿಳಿಯುತ್ತಿಲ್ಲ ಎಂದು ಕಿಡಿಕಾರಿದರು.